ADVERTISEMENT

ಬೆಳೆ ಹಾನಿ: ವೈಜ್ಞಾನಿಕ ಸಮೀಕ್ಷೆಗೆ ಬಿಜೆಪಿ ರೈತ ಮೋರ್ಚಾ ಆಗ್ರಹ

ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 15:57 IST
Last Updated 13 ಅಕ್ಟೋಬರ್ 2025, 15:57 IST
<div class="paragraphs"><p>ಎ.ಎಸ್‌. ಪಾಟೀಲ ನಡಹಳ್ಳಿ</p></div>

ಎ.ಎಸ್‌. ಪಾಟೀಲ ನಡಹಳ್ಳಿ

   

ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಆಗಿರುವ ಬೆಳೆಹಾನಿ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ, ವಾಸ್ತವ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸುವಂತೆ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ 10 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ, ಪ್ರವಾಹದಿಂದ ಹಿಂದೆಂದೂ ಆಗಿರದಷ್ಟು ಬೆಳೆ ಹಾನಿಯಾಗಿದೆ. ಆದರೆ, ರಾಜ್ಯ ಸರ್ಕಾರ ಬೆಳೆ ಹಾನಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದೆ. ವೈಜ್ಞಾನಿಕವಾಗಿ ಸಮೀಕ್ಷೆ ಕೈಗೊಂಡಿಲ್ಲ. ಪರಿಹಾರವನ್ನೂ ನೀಡಿಲ್ಲ. ಅಲ್ಲದೇ, ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಕೇಂದ್ರದಿಂದ ಬರುವ ಎನ್‌ಡಿಆರ್‌ಎಫ್‌ ಹಾಗೂ ಬೆಳೆ ವಿಮೆ ಮೊತ್ತವು ರೈತರ ಕೈತಪ್ಪಿ ಹೋಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಉತ್ತರ ಕರ್ನಾಟಕದ 10 ಜಿಲ್ಲೆಗಳಲ್ಲಿ ಬೆಳೆಹಾನಿ ದೊಡ್ಡ ಪ್ರಮಾಣದಲ್ಲಿ ಆಗಿದೆ. ಒಟ್ಟು 28.30 ಲಕ್ಷ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. 38.41 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಆದರೆ, ರಾಜ್ಯ ಸರ್ಕಾರ ಕೇವಲ 10 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು.

ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಬೀದರ್‌, ಯಾದಗಿರಿ, ಜಿಲ್ಲೆಗಳಲ್ಲಿ ಶೇ 80ರಷ್ಟು ಬೆಳೆ ಹಾನಿಯಾಗಿದೆ.  ರಾಯಚೂರು, ಬೆಳಗಾವಿ ಜಿಲ್ಲೆಗಳಲ್ಲಿ ಶೇ 50ರಷ್ಟು ಮತ್ತು ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಶೇ 60ರಷ್ಟು ಬೆಳೆ ಹಾನಿಯಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಬೆಳೆ ಪರಿಹಾರ, ರಸ್ತೆ, ಸೇತುವೆ ಮತ್ತಿತರರ ಮೂಲಸೌಲಭ್ಯ ದುರಸ್ತಿ ಸೇರಿದಂತೆ ಒಟ್ಟು ₹2500 ಕೋಟಿ ಪರಿಹಾರ ಘೋಷಣೆ ಮಾಡಿದೆ. ಪ್ರತಿ ಹೆಕ್ಟೆರ್‌ಗೆ ₹17 ಸಾವಿರ ಕೊಡುವುದಾಗಿ ಹೇಳಿದ್ದಾರೆ. ಇದು ಯಾವುದಕ್ಕೂ ಸಾಲದು. ಕನಿಷ್ಠ ಪ್ರತಿ ಹೆಕ್ಟೆರ್‌ಗೆ ₹ 20 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಕೇವಲ ಮೂರು ಜಿಲ್ಲೆಗಳಲ್ಲಿ ಮೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದರೆ, ಯಾವುದೇ ರೈತರ ಹೊಲಕ್ಕೆ ಖುದ್ದಾಗಿ ಭೇಟಿ ನೀಡಿ ಸಂಕಷ್ಟ ಆಲಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ಸಂಬಂಧಪಟ್ಟ ಆಯಾ ಜಿಲ್ಲೆಗಳಲ್ಲಿ  ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿಲ್ಲ ಎಂದು ಆರೋಪಿಸಿದರು.

ಮಳೆ, ಪ್ರವಾಹದಿಂದ ಆಗಿರುವ ನೈಜ ಬೆಳೆ ಹಾನಿಯನ್ನು ಮುಚ್ಚಿಟ್ಟು ಸಂಕಟದಲ್ಲಿರುವ ರೈತರ ಜೊತೆ ಚೆಲ್ಲಾಟವಾಡದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬೆಳೆ ಹಾನಿ ಪರಿಹಾರ ಎಷ್ಟು ಕೊಡಬೇಕು ಎಂಬುದನ್ನು ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಿ, ಅದಕ್ಕೂ ಮೊದಲು ಆಯಾ ಜಿಲ್ಲಾಡಳಿತ ವಾಸ್ತವ ನಷ್ಠದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು, ನಿರ್ಲಕ್ಷ್ಯ ತೋರಿದಲ್ಲಿ, ರೈತರಿಗೆ ಅನ್ಯಾಯ ಮಾಡುವ ಪ್ರಯತ್ನ ನಡೆದಲ್ಲಿ ಕಾನೂನು ಮೀರಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ರೈತರಿಗೆ ಬೆಳೆ ಹಾನಿ ಪರಿಹಾರ ಸಿಗುವವರೆಗೂ ಬಿಜೆಪಿ ರೈತರ ಪರವಾಗಿ ಬೀದಿಗಿಳಿದು ಹೋರಾಟ ಮಾಡಲು ಸಿದ್ಧವಾಗಿದೆ ಎಂದು ಹೇಳಿದರು.

ಸಂಸದ ರಮೇಶ ಜಿಗಜಿಣಗಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಎಸ್‌.ಬಿ.ಬೆಳ್ಳುಬ್ಬಿ, ಮುಖಂಡರಾದ ವಿಜುಗೌಡ ಪಾಟೀಲ, ಸಂಜೀವ ಐಹೊಳಿ, ಜಿಲ್ಲಾ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಧ್ಯಮ ವಕ್ತಾರ ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.