ಈಶ್ವರ ಖಂಡ್ರೆ
ಫೇಸ್‌ಬುಕ್ ಚಿತ್ರ
ಸುವರ್ಣ ವಿಧಾನಸೌಧ (ಬೆಳಗಾವಿ): ಬೆಳೆ ವಿಮೆ ಯೋಜನೆ ಅಡಿಯಲ್ಲಿ ಬಹಳ ದೊಡ್ಡ ಗೋಲ್‌ಮಾಲ್ ನಡೆಯುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಶುಕ್ರವಾರದ ಕಲಾಪದ ವೇಳೆ ಬಿಜೆಪಿಯ ಕೇಶವ ಪ್ರಸಾದ್ ಅವರು ನಿಯಮ 68ರ ಅಡಿಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಮತ್ತು ಬೆಳೆ ನಷ್ಟ ಪರಿಹಾರದ ಕುರಿತು ಮಾತನಾಡಿದರು. ‘ರೈತರಿಗೆ ಬೆಳೆ ವಿಮೆ ಮಾಡಿಸುವ ವ್ಯವಸ್ಥೆಯನ್ನು ಸರ್ಕಾರವು ಮಾಡಿದರೆ, ಆರ್ಥಿಕ ಸಂಕಷ್ಟಕ್ಕೆ ರೈತರು ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದು’ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರ ಖಂಡ್ರೆ, ‘2016ರಿಂದ 2024ರವರೆಗೆ ಬೆಳೆ ವಿಮೆ ಯೋಜನೆ ಅಡಿಯಲ್ಲಿ ಖಾಸಗಿ ವಿಮಾ ಕಂಪನಿಗಳು ಪ್ರತಿ ವರ್ಷ ಸರಾಸರಿ ₹10,000 ಕೋಟಿ ಲಾಭ ಮಾಡಿಕೊಂಡಿವೆ. ಆದರೆ ರೈತರಿಗೆ ಪರಿಹಾರ ಸಿಗುತ್ತಿಲ್ಲ. ಬೆಳೆ ನಷ್ಟವಾದ ಮೂರು ದಿನಗಳ ಒಳಗೆ ವೆಬ್‌ಲಿಂಕ್ ಅಥವಾ ದೂರವಾಣಿ ಕರೆ ಮೂಲಕ ರೈತರು ದೂರು ನೀಡಬೇಕು ಎಂಬ ಷರತ್ತನ್ನು ಈ ಕಂಪನಿಗಳು ವಿಧಿಸಿವೆ. ಆದರೆ ಆ ವೆಬ್‌ಲಿಂಕ್‌ಗಳು ಕೆಲಸಮಾಡುವುದಿಲ್ಲ. ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ಕಾಲಮಿತಿಯಲ್ಲಿ ದೂರು ನೀಡಿಲ್ಲ ಎಂಬುದನ್ನೇ ನೆಪ ಮಾಡಿಕೊಂಡು ವಿಮಾ ಪರಿಹಾರ ನಿರಾಕರಿಸುತ್ತವೆ’ ಎಂದರು.
ಕೇಶವ ಪ್ರಸಾದ್ ಅವರು, ‘ಸಮಸ್ಯೆಗಳು ಇದ್ದರೆ ಅದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು’ ಎಂದರು. ಖಂಡ್ರೆ ಅವರು, ‘ಈಗಾಗಲೇ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾವ ಕಳುಹಿಸಿದ್ದೇವೆ. ಈವರೆಗೆ ಏನೂ ಪ್ರಗತಿ ಆಗಿಲ್ಲ’ ಎಂದರು.
ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ‘ರಾಜ್ಯ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದರೆ ಸಾಲದು. ಅದರ ಬೆನ್ನು ಬೀಳಬೇಕು’ ಎಂದು ಸಲಹೆ ನೀಡಿದರು.
ನೀರಾವರಿ ಸಮಸ್ಯೆ ಕುರಿತು ಮಾತನಾಡಿದ ಬಿಜೆಪಿಯ ವೈ.ಎಂ.ಸತೀಶ್, ‘ತುಂಗಭದ್ರಾ ಜಲಾಶಯದಲ್ಲಿ ಬಹಳಷ್ಟು ಹೂಳು ತುಂಬಿದೆ. ಇದರಿಂದ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಹಿಂದಿನ ಬಿಜೆಪಿ ಸರ್ಕಾರವು ನವಿಲೆ ಸಮಾನಾಂತರ ಜಲಾಶಯವನ್ನು ಘೋಷಿಸಿತ್ತು. ರಾಜ್ಯ ಸರ್ಕಾರವು ಆ ಜಲಾಶಯ ನಿರ್ಮಿಸಿದರೆ ಬಳ್ಳಾರಿ, ವಿಜಯನಗರ, ರಾಯಚೂರು ಭಾಗದ ರೈತರಿಗೆ ಅನುಕೂಲವಾಗಲಿದೆ. ದೊಡ್ಡ ಜಲಾಶಯಗಳ ಹೊರತಾಗಿ ಕೆರೆಗಳಿಗೆ ನೀರು ತುಂಬಿಸುವ, ಮಳೆ ನೀರು ಸಂಗ್ರಹಿಸುವ ಉಪಕ್ರಮಗಳನ್ನು ಕೈಗೊಳ್ಳಬೇಕು’ ಸರ್ಕಾರಕ್ಕೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.