ADVERTISEMENT

₹ 20,810 ಕೋಟಿ ಕೃಷಿ ಸಾಲ ವಿತರಣೆ ಗುರಿ: ಎಸ್‌.ಟಿ. ಸೋಮಶೇಖರ್‌ ಘೋಷಣೆ

ಸಹಕಾರ ಸಚಿವ

​ಪ್ರಜಾವಾಣಿ ವಾರ್ತೆ
Published 31 ಮೇ 2021, 19:56 IST
Last Updated 31 ಮೇ 2021, 19:56 IST
ಸೋಮಶೇಖರ್
ಸೋಮಶೇಖರ್   

ಬೆಂಗಳೂರು: ರಾಜ್ಯದಲ್ಲಿ 2021–22ನೇ ಆರ್ಥಿಕ ವರ್ಷದಲ್ಲಿ ಸಹಕಾರ ಸಂಸ್ಥೆಗಳ ಮೂಲಕ 30 ಲಕ್ಷ ರೈತರಿಗೆ ₹ 20,810 ಕೋಟಿ ಮೊತ್ತದ ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌
ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2020–21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ ₹ 15,400 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿತ್ತು. ಈ ಅವಧಿಯಲ್ಲಿ 25.93 ಲಕ್ಷ ರೈತರಿಗೆ ₹ 17,490 ಕೋಟಿ ಸಾಲ ವಿತರಿಸಲಾಗಿದೆ. ಗುರಿಗೆ ಹೋಲಿಸಿದರೆ ಶೇಕಡ 114.70ರಷ್ಟು ಸಾಧನೆಯಾಗಿದೆ’ ಎಂದರು.

ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ರೈತರಿಗೆ ಸಾಲ ನೀಡುವುದರಲ್ಲಿ ಸಹಕಾರ ಸಂಸ್ಥೆಗಳಿಂದ ಗುರಿ ಮೀರಿದ ಸಾಧನೆಯಾಗಿದೆ. ಈ ಬಾರಿ 21 ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ಗಳಿಗೂ ಸಾಲ ವಿತರಣೆಯ ಗುರಿಯನ್ನು ಈಗಾಗಲೇ ನೀಡಲಾಗಿದೆ. ಕಳೆದ ವರ್ಷ ಆರು ಡಿಸಿಸಿ ಬ್ಯಾಂಕ್‌ಗಳು ಮಾತ್ರ ಶೇ 100ರ ಗುರಿ ಸಾಧನೆ ಮಾಡಿಲ್ಲ. ಅವುಗಳೂ ಸೇರಿದಂತೆ ಎಲ್ಲ ಡಿಸಿಸಿ ಬ್ಯಾಂಕ್‌ಗಳೂ ಶೇ 100ರಷ್ಟು ಗುರಿ ಸಾಧಿಸಬೇಕೆಂದು ಆದೇಶಿಸಲಾಗಿದೆ ಎಂದು ತಿಳಿಸಿದರು.

ADVERTISEMENT

‘ಲಾಕ್‌ಡೌನ್‌ ಅಂತ್ಯಗೊಂಡ ಬಳಿಕ ಎಲ್ಲ ಡಿಸಿಸಿ ಬ್ಯಾಂಕ್‌ಗಳಿಗೂ ನಾನೇ ಖುದ್ದಾಗಿ ಭೇಟಿ ನೀಡುತ್ತೇನೆ. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಣೆಯ ಕುರಿತು ಪರಿಶೀಲನೆ ನಡೆಸುತ್ತೇನೆ. ಸಾಲ ವಿತರಣೆಯಲ್ಲಿ ಗುರಿ ಸಾಧಿಸುವ ಸಂಬಂಧ ಅಗತ್ಯ ಸಲಹೆ, ಸೂಚನೆಗಳನ್ನು ನೀಡುತ್ತೇನೆ’ ಎಂದು ಸೋಮಶೇಖರ್‌
ಹೇಳಿದರು.

21 ಡಿಸಿಸಿ ಬ್ಯಾಂಕ್‌ಗಳಿಗೂ ಕಳೆದ ವರ್ಷ ಎಷ್ಟು ಸಾಲ ವಿತರಣೆಯ ಗುರಿ ನೀಡಲಾಗಿತ್ತು? ಎಷ್ಟು ಸಾಧನೆ ಮಾಡಲಾಗಿದೆ? ಎಂಬುದನ್ನು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್‌
ಜಿಯಾವುಲ್ಲ ಪರಿಶೀಲನೆ ನಡೆಸಿದ್ದಾರೆ. ಆ ಬಳಿಕವೇ ಪ್ರಸಕ್ತ ವರ್ಷದ ಸಾಲ ವಿತರಣೆಯ ಗುರಿ ನಿಗದಿ ಮಾಡಲಾಗಿದೆ
ಎಂದರು.

ಎಲ್ಲ ಡಿಸಿಸಿ ಬ್ಯಾಂಕ್‌ಗಳಿಗೂ ಅಪೆಕ್ಸ್‌ ಬ್ಯಾಂಕ್‌ ಸಂಪೂರ್ಣ ಸಹಕಾರ ನೀಡಲಿದೆ. ಡಿಸಿಸಿ ಬ್ಯಾಂಕ್‌ಗಳು ತಮಗೆ ನೀಡಿರುವ ಗುರಿಯನ್ನು ನಿಗದಿತ ಅವಧಿಯೊಳಗೆ ತಲುಪಲೇಬೇಕು. ಎಲ್ಲ ರೈತರಿಗೂ ಕೃಷಿ ಸಾಲ ದೊರಯಲೇಬೇಕು. ಅರ್ಹತೆ ಹೊಂದಿರುವ ಯಾವುದೇ ರೈತರಿಗೂ ಸಾಲ ನಿರಾಕರಿಸುವಂತಿಲ್ಲ ಎಂದು
ಹೇಳಿದರು.

ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರೂ ಆಗಿರುವ ಶಾಸಕ ಬೆಳ್ಳಿ ಪ್ರಕಾಶ್‌, ತುಷಾರ್‌ ಗಿರಿನಾಥ್‌, ಜಿಯಾವುಲ್ಲ ಮತ್ತು ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.