ADVERTISEMENT

ಸಂಸ್ಕಾರ, ಶ್ರಾದ್ಧಕ್ಕೆ ಕಾಗೆ ಬೇಕೆ? ಜಾಲತಾಣಗಳಲ್ಲಿ ವೈರಲ್ ಆಯ್ತು ಯುವಕನ ಸ್ಟೇಟಸ್

ಕಾಗೆ ವಶಕ್ಕೆ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 2:13 IST
Last Updated 14 ಜುಲೈ 2019, 2:13 IST
ಕಾಗೆಯ ಜತೆಗೆ ಪ್ರಶಾಂತ್
ಕಾಗೆಯ ಜತೆಗೆ ಪ್ರಶಾಂತ್   

ಪಡುಬಿದ್ರಿ: ಉತ್ತರ ಕ್ರಿಯೆ, ಶ್ರಾದ್ಧ ಕಾರ್ಯಗಳಿಗೆ, ಸಂಸ್ಕಾರಕ್ಕೆ ಬೇಕಾದವರಿಗೆ ಕಾಗೆ ನೀಡುತ್ತೇನೆ ಎಂದು ಫೇಸ್‌ಬುಕ್ ಪುಟದಲ್ಲಿ ಸ್ಟೇಟಸ್ ಹಾಕಿ ವೈರಲ್ ಆಗಿರುವ ವಿಷಯಕ್ಕೆ ಸಂಬಂಧಿಸಿ ಉಡುಪಿ ವಲಯ ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಕಾಪು ಅರಣ್ಯಾಧಿಕಾರಿಗಳು ಶನಿವಾರ ಪ್ರಶಾಂತ್ ಮನೆಗೆ ತೆರಳಿ ಕಾಗೆ ವಶಕ್ಕೆ ಪಡೆದುಕೊಂಡಿದ್ದಾರೆ.

ಟೈಲರ್ ವೃತ್ತಿ ಮಾಡಿಕೊಂಡಿದ್ದ ಪ್ರಶಾಂತ್‌ ಮನೆ ಸಮೀಪದ ತೆಂಗಿನ ಮರದಿಂದ ಮೂರು ಕಾಗೆ ಮರಿ ಮೂರು ತಿಂಗಳ ಹಿಂದೆ ಕೆಳಗೆ ಬಿದ್ದಿದ್ದವು. ಪ್ರಶಾಂತ್ ಕಾಗೆ ಮರಿ ಜೋಪಾನವಾಗಿ ತನ್ನ ಮನೆಗೆ ತಂದು ಸಾಕಿದ್ದಾರೆ. ತಲೆಗೆ ಏಟಾಗಿದ್ದ ಎರಡು ಮರಿಗಳು ಸತ್ತು, ಉಳಿದ ಒಂದನ್ನು ಆರೈಕೆ ಮಾಡಲು ಪ್ರಾರಂಭಿಸಿದರು. ಮರಿ ಚೇತರಿಸಿ ಹಾರಾಡಲು ಆಗದ ಕಾಗೆ ಮರಿಯನ್ನು ಇತರ ಪ್ರಾಣಿಗಳಿಂದ ರಕ್ಷಿಸಲು ಗೂಡಿನೊಳಗೆ ಹಾಕಿ ಮನೆ ಮದ್ದು ಮಾಡಿ ಆಹಾರ ಕೊಟ್ಟು ಸಾಕಿದ್ದರು.

ಸ್ನೇಹಿತ ಮಾತಿನಂತೆ ಇತ್ತೀಚಿನ ದಿನಗಳಲ್ಲಿ ಕಾಗೆ ಸಂತಾನ ಕ್ಷೀಣಿಸುತಿದ್ದ ಪರಿಣಾಮ ಹಿಂದು ಸಂಪ್ರದಾಯದಲ್ಲಿ ಶ್ರಾದ್ಧ ಕ್ರಿಯೆಗಳಿಗೆ ಕಾಗೆಯ ಅವಶ್ಯಕತೆ ಇದ್ದವರು ಕಾಗೆ ಬೇಕಾದಲ್ಲಿ ಸಂಪರ್ಕಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಪರ ವಿರೋಧ ಚರ್ಚೆಗೆ ಕಾರಣವಾಯಿತು.

ADVERTISEMENT

ಈ ಸುದ್ದಿ ಅರಣ್ಯ ಇಲಾಖೆ ಕಾಪುವಿನ ಅರಣ್ಯ ರಕ್ಷಕ ಮಂಜುನಾಥ್ ಹಾಗೂ ಪಡುಬಿದ್ರಿ ಅರಣ್ಯ ರಕ್ಷಕ ಅಭಿಲಾಶ್ ಉಡುಪಿ ವಲಯ ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಮನೆಗೆ ತೆರಳಿ ಕಾಗೆನು ವಶಕ್ಕೆ ಪಡೆದು ಪಿಲಾರ್‌ನ ಕಾಡಿನಲ್ಲಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಕಾಗೆ ಸಾಕಿದ್ದು ನಿಜ. ಅದು ಯಾವುದೇ ದುರುದ್ದೇಶ ಪೂರಿತವಾಗಿರಲಿಲ್ಲ. ಮೂರು ತಿಂಗಳ ಹಿಂದೆ ನಮ್ಮ ತೋಟದಲ್ಲಿ ಬಿದ್ದಿದ್ದ ಮೂರು ಕಾಗೆ ಮರಿಗಳನ್ನು ರಕ್ಷಿಸಿ ಆರೈಕೆ ಮಾಡಿದ್ದೇನೆ. ಅದರಲ್ಲಿ ಎರಡು ಕಾಗೆ ಮರಿಗಳು ಸಾವನ್ನಪ್ಪಿದೆ. ಒಂದು ಮರಿ ಉಳಿದು ನಮ್ಮ ಆರೈಕೆಗೆ ಸ್ಪಂದಿಸಿತ್ತು ಎಂದು ಪ್ರಶಾಂತ್‌ ಹೇಳಿದರು.

ಇತ್ತೀಚೆಗೆ ಕಾಗೆ ಭಾವಚಿತ್ರ ತೆಗೆದು ಫೇಸ್‌ಬುಕ್‌ಗೆ ಹಾಕಿದ್ದರಿಂದ ಇಷ್ಟೆಲ್ಲ ಅನಾಹುತವಾಗಿದೆ. ನಾನು ಕಾಗೆ ಇಟ್ಟುಕೊಂಡು ಹಣ ಮಾಡುವ ಬಗ್ಗೆ ಉದ್ದೇಶ ಇರಲಿಲ್ಲ. ಹಣದ ಬಗ್ಗೆ ನಾನು ಎಲ್ಲಿಯೂ ಹೇಳಿಲ್ಲ. ಕಾಗೆ ರೆಕ್ಕೆ ಸರಿ ಇಲ್ಲ. ಅದು ಹಾರುವಂತಿಲ್ಲ. ಅದರ ಕಾಲುಗಳೂ ಸರಿಯಾಗಿಲ್ಲ. ಇಂದು ಉಡುಪಿ ವಲಯ ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಕಾಪು ಅರಣ್ಯಾಧಿಕಾರಿಗಳು ಕಾಗೆ ಕೊಂಡೊಯ್ದಿದ್ದಾರೆ. ಅದಕ್ಕೆ ಆರೈಕೆ ಅಗತ್ಯ ಇದೆ. ಅದನ್ನು ಹಾಗೆಯೇ ಬಿಟ್ಟರೆ ಪ್ರಾಣಿಗಳು ಅದನ್ನು ತಿನ್ನುವ ಸಾಧ್ಯತೆ ಇದೆ ಎಂದು ಪ್ರಶಾಂತ್‌
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.