ADVERTISEMENT

ಕಬ್ಬನ್‌ ಪಾರ್ಕ್‌: ವಾಹನ ಸಂಚಾರ ನಿಷೇಧ?

ನಿಷೇಧಕ್ಕೆ ಮುಖ್ಯಮಂತ್ರಿಗೆ ಮನವಿ: ಸಚಿವ ನಾರಾಯಣ ಗೌಡ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 21:09 IST
Last Updated 25 ಆಗಸ್ಟ್ 2020, 21:09 IST
ಕಬ್ಬನ್ ಉದ್ಯಾನ (ಸಾಂದರ್ಭಿಕ ಚಿತ್ರ)
ಕಬ್ಬನ್ ಉದ್ಯಾನ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತೋಟಗಾರಿಕೆ ಸಚಿವ ನಾರಾಯಣಗೌಡ ಮನವಿ ಮಾಡಿದ್ದಾರೆ.

ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ವಾಹನ ಸಂಚಾರ ನಿಷೇಧಕ್ಕೆ ನಿರ್ಣಯ ತೆಗೆದುಕೊಳ್ಳಲಾಯಿತು. ’ಈ ಬಗ್ಗೆ ಮುಖ್ಯಮಂತ್ರಿ ಅವರು ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ಪ್ರಸ್ತಾವ ಸಲ್ಲಿಸಲಾಗುತ್ತಿದೆ‘ ಎಂದು ಸಚಿವರು ತಿಳಿಸಿದರು.

'ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸುವ ಕುರಿತು ಪರಿಸರ ಪ್ರೇಮಿಗಳಿಂದ ಒತ್ತಾಯ ಬಂದಿತ್ತು. ಈ ಉದ್ಯಾನ ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯ್ದೆ-1975ರ ವ್ಯಾಪ್ತಿಗೆ ಒಳಪಟ್ಟಿದೆ. ಹಾಗಾಗಿ, ವಾಹನ ಸಂಚಾರ ನಿಷೇಧಿಸುವುದು ಅವಶ್ಯಕ' ಎಂದು ಸಚಿವರು ತಿಳಿಸಿದರು.

ADVERTISEMENT

'ಉದ್ಯಾನದಲ್ಲಿ ಪ್ರತಿದಿನ ಕನಿಷ್ಠ ಐದು ಸಾವಿರ ಮಂದಿ ವಾಯುವಿಹಾರ ಮಾಡುತ್ತಾರೆ. ಉದ್ಯಾನ ವೀಕ್ಷಿಸಲು ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಲಾಲ್‍ಬಾಗ್‍ನಂತೆ ಕಬ್ಬನ್ ಉದ್ಯಾನದಲ್ಲೂ ಪಕ್ಷಿಗಳ ಕಲರವ ಹೆಚ್ಚಾಗಬೇಕೆಂದರೆ ಸ್ವಚ್ಚ ವಾತಾವರಣ ಇರಬೇಕು. ಈ ಎಲ್ಲ ಅಂಶಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ‘ ಎಂದರು.

'ಲಾಕ್‍ಡೌನ್ ಜಾರಿಯಾದ ಬಳಿಕ ಉದ್ಯಾನದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಂಚಾರ ದಟ್ಟಣೆ ತಗ್ಗಿಸಲು ಉದ್ಯಾನದೊಳಗೆ ವಾಹನ ಸಂಚಾರಕ್ಕೆ ಅನುಮತಿ ನೀಡುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದರು. ಮುಖ್ಯಮಂತ್ರಿ ಅವರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ' ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಬಿ.ವೆಂಕಟೇಶ್ ತಿಳಿಸಿದರು.

ವಾಹನ ಸಂಚಾರ ವಿರೋಧಿಸಿ ಪ್ರತಿಭಟನೆ: ಉದ್ಯಾನದಲ್ಲಿ ಸೋಮವಾರದಿಂದ ವಾಹನ ಸಂಚಾರಕ್ಕೆ ಅನುಮತಿ ನೀಡಿರುವುದನ್ನು ವಿರೋಧಿಸಿ 'ಹೆರಿಟೇಜ್ ಬೇಕು' ಸಂಸ್ಥೆಯ ಸದಸ್ಯರು, ಸೈಕಲ್ ಸವಾರರು ಹಾಗೂ ವಾಯುವಿಹಾರಿಗಳು ಮಂಗಳವಾರ ಬೆಳಿಗ್ಗೆ 8.30ರಿಂದ 10 ಗಂಟೆಯವರೆಗೆ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.