ADVERTISEMENT

ಕೇಂದ್ರೀಯ ವಿವಿಗೆ ಅಂಬೇಡ್ಕರ್‌ ಹೆಸರು: ರಾಜ್ಯದಿಂದ ಮರು ಪ್ರಸ್ತಾವ

ಮತ್ತೆ ಮುನ್ನೆಲೆಗೆ ಬಂದ ವಿವಿ ಮರುನಾಮಕರಣ ವಿಷಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 11:10 IST
Last Updated 16 ಅಕ್ಟೋಬರ್ 2019, 11:10 IST

ಕಲಬುರ್ಗಿ: ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ಹೆಸರಿಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮರು ಪ್ರಸ್ತಾವ ಸಲ್ಲಿಸಿದೆ.ಕೇಂದ್ರ ಸರ್ಕಾರ ಈ ಪ್ರಸ್ತಾವ ಒಪ್ಪಿದರೆ, ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸಿಯುಕೆಗೆ ಅಂಬೇಡ್ಕರ್‌ ಹೆಸರಿಡುವ ಕುರಿತು 2017ರಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸ್ಪಂದನೆ ದೊರೆತಿರಲಿಲ್ಲ. ಉನ್ನತ ಶಿಕ್ಷಣ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಅವರು ಈಗ ಮರು ಪ್ರಸ್ತಾವ ಸಲ್ಲಿಸಿದ್ದು, ವಿಶ್ವವಿದ್ಯಾಲಯಗಳ ಮರುನಾಮಕರಣ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

ಹೈದರಾಬಾದ್‌ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿರುವ ರಾಜ್ಯ ಸರ್ಕಾರ, ಇದರ ಬೆನ್ನಲ್ಲೇ ಈ ಭಾಗದ ಎರಡು ಪ್ರಮುಖ ವಿಶ್ವವಿದ್ಯಾಲಯಗಳ ಹೆಸರನ್ನೂ ಬದಲಿಸಲು ಆಸಕ್ತಿ ತೋರಿದೆ.

ADVERTISEMENT

‘ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ಹೆಸರಿಡಬೇಕು ಎಂಬುದು ಈ ಭಾಗದ ಲಿಂಗಾಯತ ಸಮುದಾಯದ ಬಹುದಿನಗಳ ಬೇಡಿಕೆ. ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರಿಡಬೇಕು ಎಂಬುದು ದಲಿತ ಸಮುದಾಯದ ಒತ್ತಾಯ.ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್. ಅಂಬೇಡ್ಕರ್‌ ಹೆಸರು ಇಡಲು ಕೇಂದ್ರ ಸರ್ಕಾರ ಸಮ್ಮತಿಸಿದರೆ, ಗುಲಬರ್ಗಾ ವಿವಿಗೆ ಬಸವೇಶ್ವರ ಹೆಸರಿಟ್ಟು ಈ ಎರಡೂ ಸಮುದಾಯಗಳನ್ನು ಓಲೈಸಿಕೊಳ್ಳುವುದು ಸರ್ಕಾರದ ಉದ್ದೇಶ’ ಎನ್ನುವುದು ಮೂಲಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.