ADVERTISEMENT

ಸರ್ಕಾರ ಸಾಂಸ್ಕೃತಿಕ ಕ್ಷೇತ್ರಕ್ಕೆ ಉದಾರತೆ ತೋರಲಿ: ಸಾಣೇಹಳ್ಳಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಮೇ 2020, 20:00 IST
Last Updated 14 ಮೇ 2020, 20:00 IST
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ    

ಹೊಸದುರ್ಗ: ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಸರ್ಕಾರ ಉದಾರತೆ ತೋರಲಿ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ.

‘ಸರ್ಕಾರ ವಿವಿಧ ಅಕಾಡೆಮಿಗಳಿಗೆ ವಾರ್ಷಿಕ ಅನುದಾನವನ್ನು ಕಡಿತಗೊಳಿಸಿದೆ. ಇದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನ ನಿಲ್ಲಿಸುವ ಹೇಳಿಕೆ ನೀಡಿರುವುದು ವಿಷಾದನೀಯ. ಸರ್ಕಾರದ ಮೇಲೆ ಒತ್ತಡ ತಂದು ಬೇಕಾದ ಹಣ ಪಡೆಯುವ ಪ್ರಯತ್ನ ಮಾಡಬೇಕು’ ಎಂದು ಹೇಳಿದ್ದಾರೆ.

‘ನೆಗಡಿ ಆಗಿದೆ ಎಂದು ಮೂಗನ್ನೇ ಕೊಯ್ದು ಕೊಳ್ಳುವುದು ಸರಿಯಲ್ಲ. 2018ರಲ್ಲಿ ಬಹುತೇಕ ರಂಗ ತಂಡಗಳಿಗೆ ವಾರ್ಷಿಕವಾಗಿ ಕೊಡುತ್ತಿದ್ದ ಅನುದಾನ ಬರಲಿಲ್ಲ. ಬಂದರೂ ಮೂಗಿಗೆ ತುಪ್ಪ ಸವರಿದಂತಿತ್ತು. 2019ರ ಅನುದಾನವೂ ಕೂಡ ಮೇ ತಿಂಗಳಾದರೂ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸಾಲ ಮಾಡಿಕೊಂಡು ರಂಗ ಚಟುವಟಿಕೆ ನಡೆಸಿದವರು ಬಡ್ಡಿ ಕಟ್ಟಲೂ ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಸಾಣೇಹಳ್ಳಿಯ ರಂಗಶಾಲೆ, ಶಿವಸಂಚಾರ, ಮಕ್ಕಳ ರಂಗ ತರಬೇತಿ, ಮಾಸಿಕ ನಾಟಕ ಇತ್ಯಾದಿಗಾಗಿ ನಾವು ಪ್ರತಿವರ್ಷ ₹ 1 ಕೋಟಿಗೂ ಹೆಚ್ಚಿನ ಹಣ ವಿನಿಯೋಗಿಸುತ್ತಿದ್ದೇವೆ. ಎರಡು ವರ್ಷಗಳಿಂದ ಸರ್ಕಾರದ ಸಹಾಯಧನ ಬಾರದಿದ್ದರೆ ಅವುಗಳನ್ನು ನಡೆಸಿಕೊಂಡು ಹೋಗುವುದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.