ADVERTISEMENT

ದಿಕ್ಕು ಬದಲಿಸಿದ ‘ಕ್ಯಾರ್‌’: ತಗ್ಗಿದ ಮಳೆ

ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಭರ್ತಿ * ಭದ್ರಾವತಿಯಲ್ಲಿ ಮನೆ ಕುಸಿದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 19:45 IST
Last Updated 26 ಅಕ್ಟೋಬರ್ 2019, 19:45 IST
ನಿರಂತರ ಮಳೆಯಿಂದ ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ
ನಿರಂತರ ಮಳೆಯಿಂದ ಮಡಿಕೇರಿ ತಾಲ್ಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ   

ಬೆಂಗಳೂರು: ಕಳೆದೆರಡು ದಿನಗಳಿಂದ ಕರಾವಳಿ ಭಾಗದಲ್ಲಿ ಅಬ್ಬರಿಸಿ ಭಾರಿ ಗಾಳಿ–ಮಳೆಗೆ ಕಾರಣವಾಗಿದ್ದ ‘ಕ್ಯಾರ್‌’ ಚಂಡಮಾರುತವು ದಿಕ್ಕು ಬದಲಿಸಿದ್ದು, ಒಮನ್‌ನತ್ತ ಚಲಿಸಿದೆ. ಪರಿಣಾಮ ಶನಿವಾರ ಸಂಜೆಯ ವೇಳೆಗೆ ಈ ಭಾಗದಲ್ಲಿ ಮಳೆ ಪ್ರಮಾಣ ಕ್ರಮೇಣ ಕಡಿಮೆ ಆಗಿದೆ.

ಆದರೆ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದೆ. ಕೊಡಗು ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಸಮೀಪದ ಅರೆಬಿಳಚಿ ಕ್ಯಾಂಪ್‌ನಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಬಿದ್ದು ಲಕ್ಷ್ಮಣಪ್ಪ (72) ಎಂಬುವವರು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಬೀಸಿದ ಬಿರುಗಾಳಿಗೆ ಪೊಳಲಿಗೆ ಬಳಿ ಬಡಗಬೆಳ್ಳೂರು ಗ್ರಾಮದ ಪರಿಮೊಗರಿನಲ್ಲಿ ಅಡಿಕೆ ತೋಟಕ್ಕೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ವಿಟ್ಲ ಸಮೀಪದ ಸೇರಾಜೆಯಲ್ಲಿ ಮನೆ ಮೇಲೆ ಮರಬಿದ್ದು ವ್ಯಕ್ತಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಡುಪಿಯಲ್ಲಿಯೂ ಮಳೆ ಧಾರಾಕಾರವಾಗಿ ಸುರಿದಿದ್ದು, ಯಾವುದೇ ಅನಾಹುತ ಆಗಿಲ್ಲ.

ADVERTISEMENT

ಕಾಸರಗೋಡು ಜಿಲ್ಲೆಯಲ್ಲೂ ಅಬ್ಬರದ ಗಾಳಿ–ಮಳೆ ಸುರಿದಿದ್ದು, ಹಲವೆಡೆ ಮರ, ವಿದ್ಯುತ್ ಕಂಬಗಳು ಉರುಳಿವೆ. ನೆಲ್ಲಿಕುಂಜೆಯಲ್ಲಿ ಹಲವು ಮರಗಳು ಉರುಳಿ ಬಿದ್ದಿದ್ದು, 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ ಮೀನುಗಾರಿಕೆ ದೋಣಿಗಳು ಬಂದರಿನಲ್ಲಿಯೇ ಉಳಿದಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಬಂದರಿನಲ್ಲಿ 120 ಹಾಗೂ ಕಾರವಾರ ಬಂದರಿನಲ್ಲಿ 50ಕ್ಕೂ ಹೆಚ್ಚು ದೋಣಿಗಳು ಲಂಗರು ಹಾಕಿವೆ ಎಂದು ಕರಾವಳಿ ಕಾವಲು ಪಡೆ ಕಮಾಂಡೆಂಟ್ ಎಸ್‌.ಎಸ್‌. ದಸಿಲ್‌ ತಿಳಿಸಿದ್ದಾರೆ.

ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ಶನಿವಾರ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ, ಚಂಡಮಾರುತ ಶನಿವಾರ ಕಡಿಮೆಯಾಗಿದೆ.

ಜೊಯಿಡಾದಲ್ಲಿ ಮಳೆ ಮುಂದುವರಿದಿದ್ದು, ಸೂಪಾ ಜಲಾಶಯವು ಮತ್ತೊಮ್ಮೆ ಗರಿಷ್ಠ ಮಟ್ಟ ತಲುಪುವ ಸನಿಹದಲ್ಲಿದೆ. 564 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಶನಿವಾರ563.71 ಮೀಟರ್ ನೀರು ಸಂಗ್ರಹವಾಗಿದೆ. ಹೀಗಾಗಿ ಜಲಾಶಯದಿಂದ 5,000
ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಜಲಾಶಯದ ಹಿನ್ನೀರಿನಿಂದ ನಾಗೋಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಹಳ್ಳಿಗಳು ನಡುಗಡ್ಡೆಯಂತಾಗಿವೆ.ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕೂಡ ಜಲಾವೃತವಾಗಿದೆ. ಮುಂಡಗೋಡ ತಾಲ್ಲೂಕಿನಲ್ಲಿ ಗಾಳಿ ಸಹಿತ ಮಳೆ ಅಬ್ಬರ ಜೋರಾಗಿತ್ತು. ಭತ್ತದ ಗದ್ದೆಗಳಲ್ಲಿ ನೀರು ನಿಂತಿದ್ದು, ಕೊಯ್ಲಿಗೆ ಬಂದಿದ್ದ ತೆನೆ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯಿಂದ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಭರ್ತಿಯಾಗಿದೆ.

ಮಡಿಕೇರಿ, ಸಿದ್ದಾಪುರ, ವಿರಾಜಪೇಟೆ, ಪೊನ್ನಂಪೇಟೆ, ಕುಟ್ಟ, ಮಾಕುಟ್ಟ ಭಾಗದಲ್ಲಿ ಬಿರುಸಿನ ಮಳೆಯಾಗಿದೆ. ಭಾಗಮಂಡಲ, ತಲಕಾವೇರಿ, ನಾಪೋಕ್ಲು ಭಾಗದಲ್ಲಿ ಶುಕ್ರವಾರ ತಡರಾತ್ರಿಯಿಂದಲೂ ಗಾಳಿಸಹಿತ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಶನಿವಾರ ಧಾರಾಕಾರ ಸುರಿದಿದೆ. ಸಾಗರ ತಾಲ್ಲೂಕಿನ ಶಾಲೆಗಳಿಗೆ ರಜೆ ನೀಡಲಾಗಿತ್ತು. ಶಿವಮೊಗ್ಗದ ಸಿದ್ದೇಶ್ವರ ನಗರದಲ್ಲಿ ಮಳೆಯಿಂದಮನೆಯೊಂದು ಕುಸಿದಿದೆ.

ಹೊಸನಗರದಲ್ಲಿ ಧಾರಾಕಾರ ಮಳೆಯಾಗಿದೆ. ಶಿವಮೊಗ್ಗ ನಗರ, ಸಾಗರ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ, ಕೋಣಂದೂರಿನಲ್ಲಿ ಸಾಧಾರಣ ಮಳೆಯಾಗಿದೆ.

ದಾವಣಗೆರೆಯಲ್ಲಿ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಹರಪನಹಳ್ಳಿ, ನ್ಯಾಮತಿಯಲ್ಲಿ ಹದ ಮಳೆಯಾಗಿದೆ. ಬಸವಾಪಟ್ಟಣದಲ್ಲಿ ಭದ್ರಾ ನಾಲೆಯ ಗೋಡೆಯ ಒಂದು ಭಾಗ ಭಾಗಶಃ ಕುಸಿದು ಬಿದ್ದಿದೆ.

ಕಾರವಾರ ಸಮೀಪದ ಕೂರ್ಮಗಡದ ಬಳಿ ಸಮುದ್ರದಲ್ಲಿ ಸಿಲುಕಿದ್ದ ‘ರಾಜಕಿರಣ್’ ದೋಣಿಯಲ್ಲಿದ್ದ ಮೀನುಗಾರರನ್ನು ನೌಕಾದಳದ ಸಿಬ್ಬಂದಿ ಶನಿವಾರ ರಕ್ಷಿಸಿದರು.

ಸಮುದ್ರದಲ್ಲಿ ಸಿಲುಕಿದ್ದ 18 ಮೀನುಗಾರರ ರಕ್ಷಣೆ
ಕಾರವಾರ
: ಜಿಲ್ಲೆಯ ಕರಾವಳಿಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ, ಚಂಡಮಾರುತ ಶನಿವಾರ ಕಡಿಮೆಯಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಯಿತು.

ಇಲ್ಲಿನ ಕೂರ್ಮಗಡ ನಡುಗಡ್ಡೆಯ ಬಳಿ ಹಾಗೂಗೋವಾದ ಆಗುಂದಾಎಂಬಲ್ಲಿಎರಡು ದೋಣಿಗಳಲ್ಲಿದ್ದಎಲ್ಲ 18 ಮೀನುಗಾರರನ್ನು ಶನಿವಾರ ರಕ್ಷಿಸಲಾಯಿತು. ಚಂಡಮಾರುತದ ಹೊಡೆತದ ನಡುವೆ ದೋಣಿಗಳ ಎಂಜಿನ್ ಕೆಟ್ಟು ಸಮುದ್ರದ ಮಧ್ಯೆ ಬಾಕಿಯಾಗಿದ್ದವು. ಶುಕ್ರವಾರ ಅವುಗಳ ರಕ್ಷಣೆಗೆ ಮುಂದಾದರೂ ಪ್ರತಿಕೂಲ ಹವಾಮಾನದಿಂದಾಗಿ ಸಾಧ್ಯವಾಗಿರಲಿಲ್ಲ. ಶನಿವಾರಕಾರ್ಯಾಚರಣೆ ಮಾಡಿದ ನೌಕಾದಳ ಹಾಗೂತಟರಕ್ಷಕ ದಳದಸಿಬ್ಬಂದಿ ಯಶಸ್ವಿಯಾದರು.

‘ರಾಜಕಿರಣ್’ ಹೆಸರಿನ ದೋಣಿಯುಮಲ್ಪೆಯಿಂದ ಹಾಗೂ ‘ಎಂ.ಎ.ಮಹೀಲ್’ ಹೆಸರಿನ ದೋಣಿಯು ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ್ದವು.

ಜೊಯಿಡಾದಲ್ಲಿ ಮಳೆ ಮುಂದುವರಿದಿದ್ದು, ಸೂಪಾ ಜಲಾಶಯವು ಮತ್ತೊಮ್ಮೆ ಗರಿಷ್ಠ ಮಟ್ಟ ತಲುಪುವ ಅತ್ಯಂತ ಸನಿಹದಲ್ಲಿದೆ. 564 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಶನಿವಾರ563.71 ಮೀಟರ್ ನೀರು ಸಂಗ್ರಹವಾಗಿದೆ. ಹೀಗಾಗಿ ಜಲಾಶಯದಿಂದ 5,000 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಜಲಾಶಯದ ಹಿನ್ನೀರು ಮತ್ತೆ ಮೇಲೆ ಬಂದ ಕಾರಣ ನಾಗೋಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಹಳ್ಳಿಗಳು ನಡುಗಡ್ಡೆಯಂತಾಗಿವೆ.ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕೂಡ ಜಲಾವೃತವಾಗಿದೆ.

ಮುಂಡಗೋಡ ತಾಲ್ಲೂಕಿನಲ್ಲಿ ಶನಿವಾರವೂ ಗಾಳಿ ಸಹಿತ ಮಳೆ ಅಬ್ಬರ ಜೋರಾಗಿತ್ತು. ಭತ್ತದ ಗದ್ದೆಗಳಲ್ಲಿ ನೀರು ನಿಂತಿದ್ದು, ಕೊಯ್ಲಿಗೆ ಬಂದಿದ್ದ ತೆನೆ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ.

ಕರಾವಳಿಯಲ್ಲಿ ಇಂದು ಮಳೆ ಸಾಧ್ಯತೆ
ಬೆಂಗಳೂರು:
ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅ.27ರಂದು ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಗಂಟೆಗೆ 40ರಿಂದ 60 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಸೋಮವಾರದವರೆಗೆ ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ. ಉಳಿದ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿ ಗುಡುಗು ಸಿಡಿಲು ಹೆಚ್ಚಾಗಿ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಶನಿವಾರ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 24 ಸೆಂ.ಮೀ.ಮಳೆಯಾಗಿದೆ. ಗೋಕರ್ಣ 18, ಕೋಟ 16, ಅಂಕೋಲಾ 15, ಕಾರವಾರ 14‌, ಕೊಲ್ಲೂರು, ಕೊಟ್ಟಿಗೆಹಾರ 11, ಹೊನ್ನಾವರ 10, ಮಂಗಳೂರು 9, ಭಾಗಮಂಡಲ 8, ಉಡುಪಿ, ಕುಂದಾಪುರ , ಬೆಳ್ತಂಗಡಿಯಲ್ಲಿ ತಲಾ 7 ಸೆಂ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.