ADVERTISEMENT

ಯತ್ನಾಳ ಆರೋಪ: ಎಸಿಬಿ ತನಿಖೆಗೆ ಡಿಕೆಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮೇ 2022, 16:32 IST
Last Updated 6 ಮೇ 2022, 16:32 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ನೀಡಲು ₹ 2,500 ಕೋಟಿ ನೀಡುವಂತೆ ದೆಹಲಿಯವರು ಬೇಡಿಕೆ ಇಟ್ಟಿದ್ದರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪದ ಕುರಿತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಆಗಬೇಕಾದರೆ ₹ 2,500 ಕೋಟಿ, ಮಂತ್ರಿ ಆಗಬೇಕಾದರೆ ₹ 100 ಕೋಟಿ ಕೊಡಬೇಕು ಎಂದು ಯತ್ನಾಳ ಹೇಳಿದ್ದಾರೆ. ಅವರು ಸಾಮಾನ್ಯ ವ್ಯಕ್ತಿಯಲ್ಲ. ಸಂಸದರೂ, ಕೇಂದ್ರ ಸಚಿವರೂ ಆಗಿದ್ದವರು. ಅವರ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಬಾರದು. ಈ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆ ಆಗಬೇಕು ’ ಎಂದು ಒತ್ತಾಯಿಸಿದರು.

ಬಿಜೆಪಿ ಸರ್ಕಾರದಲ್ಲಿ ಪಿಎಸ್‌ಐ, ತಹಶೀಲ್ದಾರ್‌ ಸೇರಿದಂತೆ ಎಲ್ಲ ಹುದ್ದೆಗಳಿಗೂ ದರ ನಿಗದಿ ಮಾಡಲಾಗಿದೆ. ಮುಖ್ಯಮಂತ್ರಿ, ಮಂತ್ರಿ ಹುದ್ದೆಗೂ ದರ ನಿಗದಿ ಮಾಡಿರುವುದನ್ನು ಯತ್ನಾಳ ಹೇಳಿದ್ದಾರೆ. ಎಸಿಬಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದರು.

ADVERTISEMENT

ಪರಿಹಾರಕ್ಕೆ ಆಗ್ರಹ: ‘ಕೋವಿಡ್‌ನಿಂದ ರಾಜ್ಯದಲ್ಲಿ 4.5 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ನಾವು ಹೇಳಿದಾಗ ಸರ್ಕಾರ ಅಲ್ಲಗಳೆದಿತ್ತು. ಆರೋಗ್ಯ ಸಚಿವರು ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದ್ದರು. ಕೋವಿಡ್‌ನಿಂದ ಭಾರತದಲ್ಲಿ 47 ಲಕ್ಷ ಮಂದಿ ಸತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಈಗಲಾದರೂ ಸರ್ಕಾರ ಸತ್ಯ ಒಪ್ಪಿಕೊಂಡು ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕು’ ಎಂದು ಶಿವಕುಮಾರ್‌ ಒತ್ತಾಯಿಸಿದರು.

‘ದೆಹಲಿಯಿಂದ ನನ್ನ ಬಳಿಗೆ ಬಂದಿದ್ದ ಕೆಲವರು, ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ ₹ 2,500 ಕೋಟಿ ಸಿದ್ಧವಿಟ್ಟುಕೊಳ್ಳಿ ಎಂದಿದ್ದರು’ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದರು.

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆ ರಾಮದುರ್ಗದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ವೈರಲ್ ಆಗಿದೆ.

‘₹ 2,500 ಕೋಟಿ ಎಂದರೆ ಏನೆಂದು ತಿಳಿದಿದ್ದೀರಿ?! ಅಷ್ಟು ಹಣ ಹೆಂಗ್ ಇಡೋದು? ಕೋಣೆಯಲ್ಲಾ? ಗೋದಾಮಿನಲ್ಲಾ?! ಎಂದು ಅವರಿಗೆ ಕೇಳಿದ್ದೆ’ ಎಂದು ಅವರು ಹೇಳಿರುವುದು ವಿಡಿಯೊದಲ್ಲಿದೆ.

ಪಕ್ಷಕ್ಕೆ ಸಂಬಂಧವಿಲ್ಲ: ನಳಿನ್‌

ಬೆಂಗಳೂರು: ಬಸನಗೌಡ ಪಾಟೀಲ ಯತ್ನಾಳರ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

‘ಮುಖ್ಯಮಂತ್ರಿ ಹುದ್ದೆಗೆಹಣಕ್ಕೆ ಬೇಡಿಕೆ ಇಡಲಾಗಿತ್ತು’ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ಯತ್ನಾಳ ಅವರು ನಿರ್ದಿಷ್ಟವಾಗಿ ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡಿಲ್ಲ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಎಲ್ಲ ಪಕ್ಷಗಳ ಬಗ್ಗೆಯೂ ಚರ್ಚಿಸುತ್ತಾ, ಹೇಳಿಕೆ ನೀಡಿದ್ದಾರೆ. ಅವರು ಎಲ್ಲಿಯೂ ಬಿಜೆಪಿ ನಾಯಕತ್ವದ ವಿರುದ್ಧ ಆಪಾದನೆ ಮಾಡಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.