ಡಿಕೆಶಿ
ಬೆಂಗಳೂರು: ‘ಜಾತಿವಾರು ಸಮೀಕ್ಷೆಯ ವಿಚಾರದಲ್ಲಿ ನಮಗೆ (ಕಾಂಗ್ರೆಸ್‌ಗೆ) ರಾಜಕೀಯ ಬಣ್ಣ ಬೇಡ. ಸಾಮಾಜಿಕ ನ್ಯಾಯ ಬೇಕು. ಈ ಕಾರಣಕ್ಕೆ ನಾವು ಮತ್ತೊಮ್ಮೆ ಸಮೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಾತಿವಾರು ಮರು ಸಮೀಕ್ಷೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಟೀಕಿಸುತ್ತಿರುವ ವಿರೋಧ ಪಕ್ಷದವರು ಹಿಂದೆ ಒಂದು, ಮುಂದೆ ಒಂದು ಮಾತನಾಡಿ ರಾಜಕೀಯಬಣ್ಣ ಲೇಪಿಸುತ್ತಿದ್ದಾರೆ’ ಎಂದು ದೂರಿದರು.
‘ಈ ಹಿಂದಿನ ವರದಿ ಬಗ್ಗೆ ಟೀಕೆ ಮಾಡಿದ್ದ ವಿರೋಧ ಪಕ್ಷದವರು ಈಗ ಉಲ್ಟಾ ಮಾತನಾಡುತ್ತಿದ್ದಾರೆ. ಅದರ ಬದಲು ಹಳೆಯದನ್ನೇ ಒಪ್ಪಿಕೊಳ್ಳುವಂತೆ ಒತ್ತಾಯಿಸಲಿ’ ಎಂದರು.
‘2015ರಲ್ಲಿ ನಡೆದ ಸಮೀಕ್ಷೆಗೆ 10 ವರ್ಷವಾಗಿದೆ ಎಂದು ಜನರು ನ್ಯಾಯಾಲಯದ ಮೆಟ್ಟಿಲೇರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ 1995 ಸೆಕ್ಷನ್ 11 (2)ರ ಅನುಸಾರ ತಡೆಯಾಜ್ಞೆ ತರಬಹುದು. ಹೀಗಾಗಿ, ನಾವು ಜನರು, ಶಾಸಕರ ಭಾವನೆ, ಅಭಿಪ್ರಾಯ ಅರಿತು ಜಾತಿವಾರು ಮರು ಸಮೀಕ್ಷೆಗೆ ಕಾನೂನಾತ್ಮಕವಾಗಿ ಒಪ್ಪಿಗೆ ನೀಡಿದ್ದೇವೆ’ ಎಂದು ಸಮರ್ಥಿಸಿದರು.
ಲಿಂಗಾಯತ ಮತ್ತು ಒಕ್ಕಲಿಗರಿಂದ ಈ ಹಿಂದೆ ವಿರೋಧ ವ್ಯಕ್ತವಾದ ಬಗ್ಗೆ ಕೇಳಿದಾಗ, ‘ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಹೊಸ ಸಮೀಕ್ಷೆಯಲ್ಲಿ ಸಮಾಜದ ಎಲ್ಲರೂ ಒಳಗೊಳ್ಳುವಂತೆ ಮಾಡುವುದು ನಮ್ಮ ಉದ್ದೇಶ. ಹೊರನಾಡು ಕನ್ನಡಿಗರಿಗೆ ಸಮೀಕ್ಷೆಯಲ್ಲಿ ಭಾಗವಹಿಸಲು ಆನ್‌ಲೈನ್ ಮೂಲಕ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.