ADVERTISEMENT

ಇ.ಡಿ. ಸಮನ್ಸ್ ರದ್ದು ಕೋರಿ ಹೈಕೋರ್ಟ್‌ಗೆ ಡಿಕೆಶಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 19:33 IST
Last Updated 4 ಫೆಬ್ರುವರಿ 2019, 19:33 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಆದಾಯ ತೆರಿಗೆ (ಐ.ಟಿ) ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ಗೆ ತಡೆ ನೀಡಬೇಕು’ ಎಂದು ಕೋರಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಫೆ.2ರಂದು ಈ ಅರ್ಜಿ ಸಲ್ಲಿಸಲಾಗಿದ್ದು, ಯಾವ ನ್ಯಾಯಪೀಠದ ಮುಂದೆ ಇದರ ವಿಚಾರಣೆ ನಡೆಯಬೇಕು ಎಂಬುದು ಇನ್ನೂ ನಿಗದಿಯಾಗಿಲ್ಲ.

ಆದಾಯ ತೆರಿಗೆ ಇಲಾಖೆ ಬೆಂಗಳೂರಿನ ತನಿಖಾ ವಿಭಾಗದ ಪ್ರಧಾನ ನಿರ್ದೇಶಕ, ಉಪ ನಿರ್ದೇಶಕ, ನವದೆಹಲಿಯ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ, ಬೆಂಗಳೂರು ವಲಯ ಜಂಟಿ ನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ದೂರು ರದ್ದುಗೊಳಿಸಬೇಕು’ ಎಂದೂ ಶಿವಕುಮಾರ್ ಕೋರಿದ್ದಾರೆ. ಸಚಿನ್‌ ನಾರಾಯಣ್‌ ಹಾಗೂ ಸುನಿಲ್‌ ಕುಮಾರ್‌ ಶರ್ಮಾ ಅವರ ಪರ ಹಿರಿಯ ವಕೀಲ ಬಿ.ವಿ. ಆಚಾರ್ಯ ಹಾಜರಾಗಲಿದ್ದಾರೆ.

ಶಿವಕುಮಾರ್ ಮತ್ತು ಅವರ ಉದ್ಯಮ ಪಾಲುದಾರರಾದ ಸಚಿನ್‌ ನಾರಾಯಣ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನಿಲ್‌ ಕುಮಾರ್‌ ಶರ್ಮಾ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಅಲ್ಲಿನ ಸುಖದೇವ್‌ ವಿಹಾರ ನಿವಾಸಿ ರಾಜೇಂದ್ರ ವಿರುದ್ಧವೂ ಇ.ಡಿ ದಾಖಲಿಸಿರುವ ಇಸಿಐಆರ್ (ಜಾರಿ ಪ್ರಕರಣ ಮಾಹಿತಿ ವರದಿ) ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಲಾಗಿದೆ.

ಅರ್ಜಿದಾರರಿಗೆ ಸೇರಿದ ದೆಹಲಿಯ ಆರ್‌.ಕೆ.ಪುರಂ ಮನೆ, ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಫ್ಲ್ಯಾಟ್‌ಗಳಿಂದ ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ₹ 8.60 ಕೋಟಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

‘ಸುನೀಲ್‌ ಕುಮಾರ್‌ ಶರ್ಮಾ ದೆಹಲಿ ಅಥವಾ ಸುತ್ತಮುತ್ತಲ ಸ್ಥಳಗಳಲ್ಲಿ ಯಾವುದೇ ವ್ಯವಹಾರ ನಡೆಸುತ್ತಿಲ್ಲ. ಅವರಿಗೆ ಸೇರಿದ ಫ್ಲ್ಯಾಟ್‌ನಿಂದ ವಶಪಡಿಸಿಕೊಂಡ ₹6.68 ಕೋಟಿಯನ್ನು ಬೆಂಗಳೂರಿನಿಂದ ಹವಾಲಾ ಮಾರ್ಗದಲ್ಲಿ ಕಳಿಸಲಾಗಿದೆ. ‘ಐ.ಟಿ ದಾಳಿ ವೇಳೆ ಸಿಕ್ಕಿರುವ ಡೈರಿಯಲ್ಲಿ, ಹಣಕ್ಕೆ ಕೆ.ಜಿ ಎಂಬ ಸಂಕೇತಾಕ್ಷರ ಬಳಸಲಾಗಿದೆ’ ಎಂದು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ.

ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಶಿವಕುಮಾರ್‌, ಅಲ್ಲಿನ ಕಾಂಗ್ರೆಸ್‌ ಶಾಸಕರನ್ನು ಕರೆತಂದು ಬಿಡದಿ ಬಳಿ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇಟ್ಟಿದ್ದರು. ಅದೇ ಸಂದರ್ಭದಲ್ಲಿ ಐ.ಟಿ ಅಧಿಕಾರಿಗಳು ರೆಸಾರ್ಟ್‌, ಸಚಿವರ ಸದಾಶಿವ ನಗರದಲ್ಲಿರುವ ಮನೆ ಮತ್ತು ದೆಹಲಿಯಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿದ್ದರು.

ಈ ಮಧ್ಯೆ, ಶಿವಕುಮಾರ್‌ ಅವರಿಗೆ ಸೇರಿದೆ ಎನ್ನಲಾದ ಕೆಲವು ಬೇನಾಮಿ ಆಸ್ತಿಗಳನ್ನು ಜಪ್ತಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಇತ್ತೀಚೆಗೆ ಸ್ಪಷ್ಟಪಡಿಸಿವೆ.

ಸಚಿವರಿಗೆ ಬಂಧನ ಭೀತಿ?

ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿರುವ ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸಬಹುದು ಎಂಬ ಆತಂಕ ಸಚಿವ ಶಿವಕುಮಾರ್‌ ಅವರನ್ನು ಕಾಡುತ್ತಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಈ ಆತಂಕದಿಂದಾಗಿಯೇ ಸಚಿವ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಶಿವಕುಮಾರ್‌ ಹಾಗೂ ಅವರ ಸಹಚರರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಬಲ ಸಾಕ್ಷ್ಯಾಧಾರ ಸಂಗ್ರಹಿಸಿರುವ ಇ.ಡಿ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡದಿದ್ದರೆ ಬಂಧಿಸುವ ಸಾಧ್ಯತೆಯಿದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.