ADVERTISEMENT

ಕೋವಿಡ್ ಕಾಲದ ಕೋಲ್ಮಿಂಚುಗಳು... | ಮಕ್ಕಳ ಮನೆ ಎದುರೇ ಶಿಕ್ಷಕರಿಂದ ನಿತ್ಯ ಪಾಠ

ಓಕಳಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕರ ಮಾದರಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 19:32 IST
Last Updated 11 ಜುಲೈ 2020, 19:32 IST
ಕಮಲಾಪುರ ತಾಲ್ಲೂಕಿನ ಓಕಳಿ ಗ್ರಾಮದ ವಠಾರದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು
ಕಮಲಾಪುರ ತಾಲ್ಲೂಕಿನ ಓಕಳಿ ಗ್ರಾಮದ ವಠಾರದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರು   

ಕೋವಿಡ್ ಬಿಕ್ಕಟ್ಟಿನ ಸಂದರ್ಭವನ್ನೇ ಸಕಾರಾತ್ಮಕವಾಗಿ ಬಳಸಿಕೊಂಡು, ಎದುರಾದ ಸವಾಲನ್ನೂ ಮೆಟ್ಟಿ ನಿಂತು ಗೆಲುವಿನ ದಾರಿಯನ್ನು ಕಂಡುಕೊಂಡ ಅಪರೂಪದ ಕಥೆ ಇಲ್ಲಿದೆ...

ಕಮಲಾಪುರ (ಕಲಬುರ್ಗಿ ಜಿಲ್ಲೆ): ಕೋವಿಡ್ ಭೀತಿಯಿಂದ ಒಂದೆಡೆ ಶಾಲೆಗಳು ಬಂದ್ ಆಗಿದ್ದರೆ, ಮತ್ತೊಂದೆಡೆ ಆನ್‌ಲೈನ್‌ ಪಾಠದ ಮೂಲಕ ಮಕ್ಕಳನ್ನು ಸೆಳೆಯುವ ಪ್ರಯತ್ನ ನಡೆದಿದೆ. ಇವೆಲ್ಲದರ ಮಧ್ಯೆ ಕಮಲಾಪುರ ಸಮೀಪದ ಓಕಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳು ವಾಸವಿರುವ ವಠಾರಕ್ಕೇ ತೆರಳಿ ಪಾಠ ಮಾಡುತ್ತಿದ್ದಾರೆ.

ಶಾಲೆಯಲ್ಲಿ ಮುಖ್ಯ ಶಿಕ್ಷಕ ಸೇರಿ 9 ಶಿಕ್ಷಕರಿದ್ದು, 1 ರಿಂದ 8ನೇ ತರಗತಿಯವರೆಗೆ 235 ವಿದ್ಯಾರ್ಥಿಗಳು ಇದ್ದಾರೆ. ಅವರಲ್ಲಿ 200 ಮಕ್ಕಳು ಅದೇ ಗ್ರಾಮದವರಾದರೆ, 35 ಮಕ್ಕಳು ಪಕ್ಕದ ತಾಂಡಾದವರು.

ADVERTISEMENT

ಮಕ್ಕಳು ವಾಸವಿರುವ ಮನೆಗಳ ವಠಾರದಲ್ಲಿರುವ ಮಂದಿರದ ಬಳಿ, ಮನೆಯ ಹೊರಗಿನ ಕಟ್ಟೆ, ಸಮುದಾಯ ಭವನ ಮುಂತಾದ ಸ್ಥಳಗಳಿಗೆ ಶಿಕ್ಷಕರೇ ತೆರಳಿ, ಅಲ್ಲಿಯೇ ಮಕ್ಕಳಿಗೆ ಪಾಠ ಮಾಡುತ್ತಾರೆ. ವಿಶೇಷವೆಂದರೆ, ಎಲ್ಲ ಮಕ್ಕಳು ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಕೂರುತ್ತಾರೆ.

‘ಪ್ರತಿ ದಿನ ಶಾಲೆಗೆ ಹಾಜರಾತಿಯ ಸಹಿ ಹಾಕಲು ತೆರಳುತ್ತಿದ್ದ ನನಗೆ ಮತ್ತು ಇತರ ಶಿಕ್ಷಕರಿಗೆ ಮಕ್ಕಳು ಸುರಕ್ಷತಾ ಕ್ರಮ ಅನುಸರಿಸದೇ ಓಡಾಡುತ್ತಿರುವುದು ಕಾಣಿಸಿತು. ಅವರು ಅಕ್ಷರದ ಸಂಪರ್ಕ ಕಳೆದುಕೊಳ್ಳುತ್ತಿರುವ ಬಗ್ಗೆ ಆತಂಕವಾಯಿತು. ಈ ಕಾರಣಕ್ಕೆ ನಾವೆಲ್ಲ ಶಿಕ್ಷಕರು ಸೇರಿ, ಜುಲೈ 1ರಿಂದ ಮಕ್ಕಳು ಇರುವ ಕಡೆಯಲ್ಲೇ ಪ್ರತಿ ದಿನ ಎರಡು ಗಂಟೆ ಪಾಠ ಮಾಡಲು ನಿರ್ಧರಿಸಿದೆವು’ ಎಂದು ಶಾಲೆಯ ಮುಖ್ಯಶಿಕ್ಷಕ ಸಿದ್ರಾಮಪ್ಪ ಬಿರಾದಾರ ತಿಳಿಸಿದರು.

‘ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಲಹೆ ಅನುಸಾರ ಪ್ರತಿ ದಿನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಮಕ್ಕಳಿಗೆ ಪಾಠ ಮಾಡುತ್ತೇವೆ. ಮೊದಲಿಗೆ ಕೋವಿಡ್ ಪಿಡುಗಿನ ಜಾಗೃತಿ ಮೂಡಿಸಿ, ನಂತರ ಪಠ್ಯ ಚಟುವಟಿಕೆ ಆರಂಭಿಸುತ್ತೇವೆ. ಹೋಮ್‌ವರ್ಕ್ ನೀಡುತ್ತೇವೆ’ ಎಂದು ಹೇಳಿದರು.

‘ಶಾಲೆ ಬಂದ್‌ ಇದ್ದರೂ ಶಿಕ್ಷಕರು ಸ್ವಯಂ–ಪ್ರೇರಣೆಯಿಂದ ಮಕ್ಕಳಿಗೆ ಪಾಠ ಮಾಡುತ್ತಿರುವುದು ಶ್ಲಾಘನೀಯ. ಅವರ ಕಾರ್ಯವು ಇತರ ಶಿಕ್ಷಕರಿಗೆ ಮಾದರಿಯಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ನಲೀನ್ ಅತುಲ್ ಕೊಂಡಾಡಿದರು.

***

ನಮ್ಮ ಪ್ರಯತ್ನಕ್ಕೆ ಮಕ್ಕಳು ಮತ್ತು ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಕೊರೊನಾ ಸೋಂಕು ಹರಡಂತೆ ಸಾಕಷ್ಟು ನಿಗಾ ವಹಿಸಿದ್ದೇವೆ

- ಸಿದ್ರಾಮಪ್ಪ ಬಿರಾದಾರ,ಮುಖ್ಯ ಶಿಕ್ಷಕ

***

ಸರ್ಕಾರಿ ಶಾಲೆಯ ಮಕ್ಕಳು ಬಹು ತೇಕ ಬಡವರು. ಮಾರ್ಗದರ್ಶನದ ಕೊರತೆ ಇರುತ್ತದೆ. ಪಾಠ ಮಾಡುತ್ತಿರುವ ಶಿಕ್ಷಕರ ಕಾರ್ಯ ನಿಜಕ್ಕೂ ಶ್ಲಾಘನೀಯ

- ವೀರಣ್ಣ ಮಾಲಿ ಪಾಟೀಲ, ಎಸ್‍ಡಿಎಂಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.