ADVERTISEMENT

ಐಎಸ್‌ ನಂಟು ಆರೋಪಿ ಮಾಝ್‌ ತಂದೆ ಮುನೀರ್‌ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 1:22 IST
Last Updated 24 ಸೆಪ್ಟೆಂಬರ್ 2022, 1:22 IST
ಮುನೀರ್‌ ಅಹ್ಮದ್‌
ಮುನೀರ್‌ ಅಹ್ಮದ್‌   

ಮಂಗಳೂರು: ನಿಷೇಧಿತ ಭಯೋತ್ಪಾದಕ ಸಂಘಟನೆ ಐಎಸ್ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನಗರದ ಮಾಝ್‌ ಮುನೀರ್‌ ಅಹಮದ್ ಅವರ ತಂದೆ ಮುನೀರ್‌ ಅಹಮದ್‌ (54) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಆರ್ಯ ಸಮಾಜ ರಸ್ತೆ ಬಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ವಾಸವಿದ್ದ ಮುನೀರ್‌, ಮಗನ ಬಂಧನದ ಸುದ್ದಿ ತಿಳಿದ ಬಳಿಕ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದರು. ಶುಕ್ರವಾರ ಬೆಳಿಗ್ಗೆ ನಮಾಜ್‌ ಸಲುವಾಗಿ ಮನೆಯಿಂದ ಮಸೀದಿಗೆ ಹೋಗಿದ್ದರು. ಮಧ್ಯಾಹ್ನ ಆಟೊ ರಿಕ್ಷಾದಲ್ಲಿ ಮನೆಗೆ ಮರಳಿದ್ದರು. ಮಧ್ಯಾಹ್ನ ಮನೆಯಲ್ಲಿ ಕುಸಿದುಬಿದ್ದಿದ್ದರು. ಅವರನ್ನು ತಕ್ಷಣವೇ ಕಂಕನಾಡಿಯ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

‘ಮಾಝ್‌ ಸೆ.14ರಿಂದ ಕಾಣೆಯಾಗಿದ್ದಾನೆ ಎಂದು ಮುನೀರ್‌ ಅವರು ಅಂಚೆ ಮೂಲಕ ನಗರದ ಕದ್ರಿ ಪೊಲೀಸ್‌ ಠಾಣೆಗೆ ಸೋಮವಾರ ದೂರು ನೀಡಿದ್ದರು. ಮಾಝ್‌ನನ್ನು ಶಿವಮೊಗ್ಗ ಜಿಲ್ಲೆಯ ಪೊಲೀಸರು ಮಂಗಳವಾರ ಬಂಧಿಸಿದ್ದರು. ನಗರದಲ್ಲಿರುವ ಮನೆಗೆ ಆತನನ್ನು ಸೋಮವಾರ ರಾತ್ರಿ ಕರೆತಂದಿದ್ದ ಪೊಲೀಸರು ರಾತ್ರಿ 1 ಗಂಟೆವರೆಗೂ ಶೋಧ ಕಾರ್ಯ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಮುನೀರ್‌ ಅವರು ಬಹಳ ನೊಂದಿದ್ದರು ಎಂದು ನೆರೆಕರೆಯ ನಿವಾಸಿಗಳು ಮಾಹಿತಿ ನೀಡಿದರು.

ADVERTISEMENT

ಮುನೀರ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ. ಅಲ್ಲಿನ ಮೀನು ಮಾರುಕಟ್ಟೆ ಸಮೀಪ ಅವರ ಮನೆ ಇತ್ತು. ಕೆಲಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮುನೀರ್‌ ಊರಿಗೆ ಮರಳಿದ ಬಳಿಕ ಮೀನಿನ ವ್ಯಾಪಾರ ಮಾಡಿಕೊಂಡಿದ್ದರು. ಮಕ್ಕಳ ವಿದ್ಯಾಭ್ಯಾಸ ಸಲುವಾಗಿ ಮಂಗಳೂರಿನಲ್ಲಿ ನೆಲೆಸಿದ್ದರು.

ಆರೋಗ್ಯ ಸಮಸ್ಯೆ ಇರಲಿಲ್ಲ: ‘ಮುನೀರ್‌ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವರು ಗಟ್ಟಿಮುಟ್ಟಾಗಿಯೇ ಇದ್ದರು’ ಎಂದು ಅವರ ಸೋದರ ತಿಳಿಸಿದರು.

‘ಮುನೀರ್‌ ಅವರನ್ನು ಅವರ ಪತ್ನಿಯ ಊರಾದ ಉಡುಪಿ ಜಿಲ್ಲೆಯ ಬ್ರಹ‌್ಮಾವರ ಸಮೀಪದ ಹೊನ್ನಾಳಕ್ಕೆ ಕರೆದೊಯ್ಯಲಾಗುತ್ತದೆ. ನಂತದ ಅಲ್ಲಿಂದ ತೀರ್ಥಹಳ್ಳಿಗೆ ಕೊಂಡೊಯ್ಯುತ್ತೇವೆ. ತೀರ್ಥಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆರೋಪಿ ಮಾಝ್‌ ನಗರ ಬಂದರಿನಲ್ಲಿ ಹಾಗೂ ಕೋರ್ಟ್ ರಸ್ತೆಯ ಬಳಿ ‘‌ಲಷ್ಕರ್‌ ಎ ತಯ್ಯಬಾ ಹಾಗೂ ತಾಲಿಬಾನ್ ಪರ ಗೋಡೆಬರಹ ಬರೆದ ಪ್ರಕರಣದಲ್ಲಿ 2020ರ ನವೆಂಬರ್ 27ರಂದು ಬಂಧಿತನಾಗಿದ್ದ. ಆತನಿಗೆ 2021ರ ಸೆ. 8ರಂದು ಜಾಮೀನು ಸಿಕ್ಕಿತ್ತು.

‘ನಮಾಜ್‌ ಮುಗಿಸಿ ಮಧ್ಯಾಹ್ನ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಆಟೋರಿಕ್ಷಾದಲ್ಲಿ ಬಂದಾಗಮುನೀರ್‌ ಅವರನ್ನು ಮಾತನಾಡಿಸಿದ್ದೆ. ರಿಕ್ಷಾಕ್ಕೆ ನೀಡಲು ಅವರ ಬಳಿ ಚಿಲ್ಲರೆ ಇರಲಿಲ್ಲ. ನಾನೇ ದುಡ್ಡು ಕೊಟ್ಟಿದ್ದೆ. ಮನೆಗೆ ಹೋದ ಬಳಿಕ ಅವರು ಹಣವನ್ನು ಮರಳಿಸಿದ್ದರು. ಈಗ ನೋಡಿದರೆ ಅವರೇ ಇಲ್ಲ. ಅನೇಕ ವರ್ಷಗಳಿಂದ ಈ ಫ್ಲ್ಯಾಟ್‌ನಲ್ಲೇ ನೆಲೆಸಿದ್ದಾರೆ. ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಇದ್ದರು. ಮಕ್ಕಳ ಶಿಕ್ಷಣದ ಸಲುವಾಗಿ ತುಂಬಾ ಕಷ್ಟಪಟ್ಟಿದ್ದರು. ಆದರೆ ಮಗನ ವಿಚಾರದಲ್ಲಿ ಆದ ಬೆಳವಣಿಗೆಗಳಿಂದ ತೀವ್ರ ನೊಂದಿದ್ದರು’ ಎಂದು ಮುನೀರ್‌ ಅವರು ವಾಸವಿದ್ದ ಅಪಾರ್ಟ್‌ಮೆಂಟ್‌ ಸಮುಚ್ಚಯದ ಮಹಿಳೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.