ADVERTISEMENT

ಪ್ರವೀಣ್‌ ನೆಟ್ಟಾರು ಹತ್ಯೆ: ಮತ್ತಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 15:51 IST
Last Updated 7 ಆಗಸ್ಟ್ 2022, 15:51 IST
ಪ್ರವೀಣ್‌ ನೆಟ್ಟಾರು
ಪ್ರವೀಣ್‌ ನೆಟ್ಟಾರು   

ಮಂಗಳೂರು: ಬಿಜೆಪಿಯ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.

ಸುಳ್ಯ ತಾಲ್ಲೂಕಿನ ನಾವೂರು ನಿವಾಸಿ ಅಬೀದ್‌ (22) ಹಾಗೂ ಬೆಳ್ಳಾರೆ ಸಮೀಪದ ಗೌರಿಹೊಳೆ ನಿವಾಸಿ ನೌಫಾಲ್‌ (22) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ಆರು ಮಂದಿಯ ಬಂಧನವಾದಂತಾಗಿದೆ.

‘ಆರೋಪಿಗಳು ಪ್ರವೀಣ್‌ ನೆಟ್ಟಾರು ಕೊಲೆ ಸಂಚು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠ ಹೃಷಿಕೇಶ್‌ ಸೋನಾವಣೆ ಮಾಹಿತಿ ನೀಡಿದ್ದಾರೆ.

ADVERTISEMENT

‘ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಮಹತ್ತರ ಸುಳಿವುಗಳು ಸಿಕ್ಕಿವೆ. ಹತ್ಯೆ ಮಾಡಿದವರು ಯಾರು ಎಂಬುದು ಗೊತ್ತಾಗಿದೆ. ಅವರಿಗಾಗಿ ಶೋಧ ನಡೆಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಪ್ರವೀಣ್‌ ನೆಟ್ಟಾರು ಅವರನ್ನು ಬೆಳ್ಳಾರೆಯಲ್ಲಿ ಜುಲೈ 26ರಂದು ರಾತ್ರಿ ಹತ್ಯೆ ಮಾಡಲಾಗಿತ್ತು. ಆರೋಪಿಗಳಾದ ಜಾಕೀರ್‌ ಹಾಗೂ ಶಫೀಕ್‌ ಅವರನ್ನು ಜುಲೈ 28ರಂದು ಪೊಲೀಸರು ಬಂಧಿಸಿದ್ದರು. ಮತ್ತಿಬ್ಬರು ಆರೋಪಿಗಳಾದ ಬೆಳ್ಳಾರೆ ಪಳ್ಳಿಮಜಲುವಿನ ಸದ್ದಾಂ ಹಾಗೂ ಹ್ಯಾರಿಸ್‌ನನ್ನು ಆ.2ರಂದು ಬಂಧಿಸಿದ್ದರು. ಆರೋಪಿಗಳ ವಿರುದ್ಧ 1967ರ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯ (ಯುಎಪಿಎ) ಸೆಕ್ಷನ್ 16 ಹಾಗೂ ಸೆಕ್ಷನ್‌ 18ರ ಅಡಿ ಎಫ್‌ಐಆರ್‌ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.