
ಡಿಕೆಶಿ
ಬೆಂಗಳೂರು: ‘ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರು, ದಲಿತ ಸಚಿವನಿಗೆ ತೊಂದರೆ ನೀಡಲು ಈ ರೀತಿ ಮಾಡುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಕಾಲದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿತ್ತು. ಆಗ ಅವರ ಸರ್ಕಾರದಲ್ಲಿ ಯಾರು ರಾಜೀನಾಮೆ ಕೊಟ್ಟಿದ್ದರು’ ಎಂದು ಪ್ರಶ್ನಿಸಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನೆಲ್ಲಾ ಭ್ರಷ್ಟಾಚಾರ ಆಗಿದೆ ಎಂದು ಸಚಿವ ತಿಮ್ಮಾಪುರ ಅವರು ಸದನದಲ್ಲಿ ತಿಳಿಸಿದ್ದಾರೆ. ಬಿಜೆಪಿ ಅವರು ಮಾಡುತ್ತಿರುವ ಆರೋಪಕ್ಕೆ ಸಾಕ್ಷ್ಯಗಳಿಲ್ಲ. ಎಲ್ಲವೂ ಸುಳ್ಳು ಆರೋಪಗಳು’ ಎಂದರು.
‘ವಿರೋಧ ಪಕ್ಷಗಳು ತಾವು ಬದುಕಿದ್ದೇವೆ ಎಂದು ತೋರಿಸಲು ಮುಂದಾಗಿದ್ದಾರೆ. ನರೇಗಾ ಯೋಜನೆ ಬಗ್ಗೆ ಚರ್ಚೆ ಮಾಡುವುದು ಅವರಿಗೆ ಬೇಕಾಗಿಲ್ಲ. ಹೀಗಾಗಿ, ನಾಟಕ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ತಮ್ಮ ಸರ್ಕಾರ ಜಾರಿಗೆ ತಂದಿರುವ ನೂತನ ಕಾಯ್ದೆ ಬಗ್ಗೆ ಚರ್ಚೆ ಮಾಡಲಿ. ಇದು ವಿಷಯಾಂತರ ಮಾಡುವ ಪ್ರಯತ್ನ’ ಎಂದು ತಿರುಗೇಟು ನೀಡಿದರು.
‘ನರೇಗಾ ಯೋಜನೆಯಿಂದ ಆಗಿರುವ ಅನುಕೂಲದ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂಬುದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ನರೇಗಾ ಕಾಯ್ದೆಯಲ್ಲಿ ಪ್ರತಿ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕೆಲಸ ನಿರ್ಧಾರ ಮಾಡಬಹುದಾಗಿತ್ತು. ಹೊಸ ಕಾಯ್ದೆಯಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಈ ಯೋಜನೆಯಿಂದ ಪ್ರತಿ ಹಳ್ಳಿಯಲ್ಲಿ ಎಷ್ಟು ದನದ ಕೊಟ್ಟಿಗೆ ಕಟ್ಟಿಸಬಹುದು? ಎಷ್ಟು ರೈತರ ಜಮೀನು ಮಟ್ಟ ಮಾಡಿಸಬಹುದು ಎಂದು ಬಿಜೆಪಿ ನಾಯಕರು ಹೇಳಲಿ’ ಎಂದು ಸವಾಲೆಸೆದರು.
‘ಬಿಜೆಪಿ ಆಡಳಿತ ರಾಜ್ಯಗಳಲ್ಲಿಯೂ ಈ ಕಾಯ್ದೆ ಜಾರಿ ಅಸಾಧ್ಯ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾವು ಇಟ್ಟುಕೊಂಡು ಕೂತಿದ್ದೇವೆ. ಈ ಬಗ್ಗೆ ಅವರು ಚರ್ಚೆ ಮಾಡಲಿ, ನಾವೂ ಚರ್ಚೆ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.