
ಬೆಂಗಳೂರು: ‘ಪ್ರಿಯಾಂಕ್ ಖರ್ಗೆ ಅವರ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ದಲಿತರು ನೆನಪಾಗುತ್ತಾರೆ. ಖರ್ಗೆ ಕುಟುಂಬ ಎಷ್ಟು ದಲಿತರನ್ನು ಬೆಳೆಸಿದೆ? ದಲಿತರ ಪರ ಎಷ್ಟು ಹೋರಾಟಗಳನ್ನು ಮಾಡಿದೆ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿತ್ತಾಪುರ ವಿಚಾರದಲ್ಲಿ ಆಯ್ದ ಕೆಲವು ದಲಿತ ಮುಖಂಡರನ್ನು ಎತ್ತಿಕಟ್ಟಿ ಆಟ ಆಡುತ್ತಿದ್ದಾರೆ ಎಂದು ದೂರಿದರು.
‘ಚಿತ್ತಾಪುರದಲ್ಲಿ ನ.2 ರಂದು ಹಲವು ದಲಿತ ಸಂಘಟನೆಗಳು ಪಥಸಂಚಲನ ಮಾಡುತ್ತೇವೆ ಎಂದು ನ್ಯಾಯಾಲಯದಲ್ಲಿ ಅನುಮತಿಗಾಗಿ ಅರ್ಜಿ ಹಾಕಿವೆ. ಈ ಕಾರಣಕ್ಕೆ ಶಾಂತಿ ಸಭೆ ಮಾಡುವಂತೆ ನ್ಯಾಯಾಲಯವೂ ಆದೇಶ ನೀಡಿದೆ. ನಾವು (ಬಿಜೆಪಿ) ಯಾವ ರೀತಿ ‘ಐ ಲವ್ ಆರ್‌ಎಸ್‌ಎಸ್’ ಎನ್ನುತ್ತೇವೆಯೊ ಅದೇ ರೀತಿ ಡಿಎಸ್‌ಎಸ್ ಸಂಘಟನೆಗಳನ್ನೂ ಪ್ರೀತಿಯಿಂದ ಕಾಣುತ್ತೇವೆ’ ಎಂದರು.
‘ದಲಿತ ಸಂಘಟನೆಗಳು ಯಾವತ್ತೂ ಪಥ ಸಂಚಲನ ಮಾಡಿಲ್ಲ. ಆದರೆ ಈಗ ನಾವೂ ಪಥ ಸಂಚಲನ ಮಾಡುತ್ತೇವೆ ಎಂದಿದ್ದು ಏಕೆ? ಇವರು ಯಾವುದಾದರೂ ಧರ್ಮದ ಪರವೇ? ಅಥವಾ ದಲಿತ ಸಮುದಾಯಗಳ ಪರವೇ? ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಕುಟುಂಬದ ಪರವೇ? ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಛಲವಾದಿ ಒತ್ತಾಯಿಸಿದರು.
‘ಪ್ರಿಯಾಂಕ್ ಅವರು ಎಷ್ಟು ಜನ ದಲಿತರನ್ನು ಗುತ್ತಿಗೆದಾರರನ್ನಾಗಿ ಮಾಡಿದ್ದಾರೆ? ಎಷ್ಟು ಜನರಿಗೆ ಕೊಳವೆ ಬಾವಿ ಹಾಕಿಸಿಕೊಟ್ಟಿದ್ದಾರೆ? ಎಷ್ಟು ಜನ ವಿದ್ಯಾರ್ಥಿಗಳ ಶಾಲಾ– ಕಾಲೇಜು ಶುಲ್ಕವನ್ನು ಕಟ್ಟಿದ್ದಾರೆ. ಎಷ್ಟು ದಲಿತ ಅಭ್ಯರ್ಥಿಗಳಿಗೆ ನೌಕರಿ ಕೊಡಿಸಿದ್ದಾರೆ ಎಂಬ ಲೆಕ್ಕ ನೀಡಲಿ’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.