ADVERTISEMENT

‘ಅಸ್ಪೃಶ್ಯತೆ ನಿವಾರಣೆಗೆ ಜಾಗೃತಿ ಮೂಡಿಸಿ’

ರಾಜ್ಯ ಸರ್ಕಾರಕ್ಕೆ ದಲಿತ ಹಕ್ಕುಗಳ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಮೇ 2025, 15:57 IST
Last Updated 23 ಮೇ 2025, 15:57 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಅಸ್ಪೃಶ್ಯತೆ ಆಚರಣೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯೇ ಆಗುತ್ತಿಲ್ಲ. ಪರಿಣಾಮವಾಗಿ ಇಂತಹ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ಸಂಬಂಧ ಸರ್ಕಾರವೇ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದು ಕರ್ನಾಟಕ ದಲಿತ ಹಕ್ಕುಗಳ ಸಮಿತಿ ರಾಜ್ಯ ಉಪಾಧ್ಯಕ್ಷ ಬಿ.ರಾಜಶೇಖರಮೂರ್ತಿ ಒತ್ತಾಯಿಸಿದ್ದಾರೆ.

‘ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದವು. ಈ ಕಾರಣದಿಂದ ಬಹುತೇಕ ದಲಿತರು 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿದರು. ಆದರೆ ಕಾಂಗ್ರೆಸ್‌ ಸರ್ಕಾರದಿಂದಲೂ ದಲಿತರಿಗೆ ರಕ್ಷಣೆ ಇಲ್ಲದಾಗಿದೆ’ ಎಂದು ಅವರು ದೂರಿದ್ದಾರೆ.

ADVERTISEMENT

‘ತುಮಕೂರಿನ ಮಧುಗಿರಿಯ ಕಂದಗಾಲು ಗ್ರಾಮದಲ್ಲಿ ಈಚೆಗೆ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಲಾಗಿದೆ. ರಾಮನಗರದ ಹಾರೋಹಳ್ಳಿಯ ಬನವಾಸಿ ಗ್ರಾಮದ ಜಾತ್ರೆಗೆ ಬರಬೇಡಿ ಎಂದು ದಲಿತರಿಗೆ ನಿರ್ಬಂಧ ಹೇರಲಾಗಿದೆ. ಮಂಡ್ಯದ ಕೆ.ಆರ್‌.ಪೇಟೆಯ ಕತ್ತರಘಟ್ಟ ಗ್ರಾಮದ ಜಯಕುಮಾರ್ ಅವರ ಮೆದೆಗೆ ಬೆಂಕಿ ಹಾಕಲಾಗಿದೆ ಎಂಬ ಆರೋಪಗಳಿವೆ’ ಎಂದು ವಿವರಿಸಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣಗಳಲ್ಲಿ ಮಾತ್ರ ದಲಿತರ ರಕ್ಷಣೆ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಈ ಸರ್ಕಾರದ ಅವಧಿಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಶೇ 3ರಷ್ಟರಲ್ಲಿ ಮಾತ್ರ. ಉಳಿದ ಪ್ರಕರಣಗಳನ್ನು ಮುಚ್ಚಿಹಾಕಲಾಗುತ್ತಿದೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.