ADVERTISEMENT

ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಹಾನಿ: ದೂರು

​ಪ್ರಜಾವಾಣಿ ವಾರ್ತೆ
Published 6 ಮೇ 2022, 20:37 IST
Last Updated 6 ಮೇ 2022, 20:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಪೇರಡ್ಕದಲ್ಲಿ ಚರ್ಚ್ ಕಟ್ಟಡವೊಂದಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು, ಶಿಲುಬೆಗೆ ಹಾನಿ ಮಾಡಿ, ಹನುಮಂತನ ಪೋಟೋ ಇಟ್ಟಿರುವ ಘಟನೆ ನಡೆದಿದೆ. ಪ್ರಾರ್ಥನಾ ಮಂದಿರದ ಧರ್ಮಗುರು ಫಾ. ಜೋಸ್‌ ವರ್ಗೀಸ್‌ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಮೇ 1ರ ಮಧ್ಯರಾತ್ರಿ ಇಮ್ಯಾನುವೆಲ್ ಅಸೆಂಬ್ಲಿ ಆಫ್‌ ಗಾಡ್‌ ಹೆಸರಿನ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ನುಗ್ಗಿದ ದುಷ್ಕರ್ಮಿಗಳು ಶಿಲುಬೆಯನ್ನು ನಾಶ ಮಾಡಿ, ಕೇಸರಿ ಧ್ವಜ ಹಾರಿಸಿದ್ದಾರೆ. ಕಟ್ಟಡದ ಒಳಭಾಗದ ಪ್ರಾರ್ಥನಾ ಮಂದಿರದಲ್ಲಿ ಹನುಮಂತನ ಭಾವಚಿತ್ರ ಇಟ್ಟಿದ್ದಾರೆ. ವಿದ್ಯುತ್ ಮೀಟರ್, ನೀರಿನ ಪಂಪ್, ಪೈಪ್‌ಗಳನ್ನು ನಾಶಪಡಿಸಿದ್ದು, ಪ್ರಾರ್ಥನಾ ಕೇಂದ್ರಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕಟ್ಟಡಕ್ಕೆ 30 ವರ್ಷಗಳ ಹಿಂದಿನಿಂದಲೂ ತೆರಿಗೆ ಪಾವತಿಸಲಾಗುತ್ತಿದೆ. ಕಟ್ಟಡದ ನಂಬರ್‌ 1/107 ಇಮ್ಯಾನುವೆಲ್‌ ಅಸೆಂಬ್ಲಿ ಆಫ್‌ ಗಾಡ್‌ ಕ್ರೈಸ್ತ ಪ್ರಾರ್ಥನಾ ಮಂದಿರವಾಗಿದೆ ಎಂದು ಜೋಸ್‌ ವರ್ಗೀಸ್‌ ತಿಳಿಸಿದ್ದಾರೆ.

ADVERTISEMENT

ದುಷ್ಕರ್ಮಿಗಳ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನಾವಣೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.