ADVERTISEMENT

ಕೋರ್ಟ್ ಸೂಚಿಸಿದ್ದರೂ ಸೌಕರ್ಯ ಇಲ್ಲ: ದರ್ಶನ್ ಪರ ವಕೀಲರಿಂದ ಮತ್ತೆ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 15:56 IST
Last Updated 15 ಸೆಪ್ಟೆಂಬರ್ 2025, 15:56 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ನಟ ದರ್ಶನ್‌ ಅವರಿಗೆ ಮೂಲಸೌಲಭ್ಯ ಕಲ್ಪಿಸುವಂತೆ ಕೋರ್ಟ್‌ ಸೂಚನೆ ನೀಡಿದ್ದರೂ ಜೈಲಿನ ಅಧಿಕಾರಿಗಳು ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ದರ್ಶನ್‌ ಪರ ವಕೀಲರು 57ನೇ ಸಿಸಿಎಚ್ ಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದರು.

‘ಹಾಸಿಗೆ, ದಿಂಬು ನೀಡುವಂತೆ ಆದೇಶಿಸಿದ್ದರೂ ಜೈಲಿನ ಅಧಿಕಾರಿಗಳು ಯಾವುದೇ ಸೌಕರ್ಯ ನೀಡಿಲ್ಲ. ತುಂಬಾ ಚಳಿಯಿದ್ದು, ಜೈಲಿನಲ್ಲಿ ದರ್ಶನ್‌ಗೆ ಕಷ್ಟವಾಗುತ್ತಿದೆ’ ಎಂದು ವಕೀಲರು ಹೇಳಿದರು. ಅರ್ಜಿ ಸ್ವೀಕರಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿತು.

‘ಕೋರ್ಟ್ ಆದೇಶದ ಪ್ರತಿಯನ್ನು ಜೈಲಿನ ಅಧಿಕಾರಿಗಳಿಗೆ ಇ–ಮೇಲ್ ಮಾಡಲಾಗಿದೆ. ಆದರೂ ದರ್ಶನ್‌ಗೆ ಅದೇ ನರಕ ಮುಂದುವರಿದಿದೆ. ಎರಡು-ಮೂರು ಬಾರಿ ಜೈಲಿಗೆ ಹೋಗಿ ವಿಚಾರಿಸಿದ್ದೀವಿ. ಆದರೂ ಯಾವುದೇ ಸೌಲಭ್ಯ ನೀಡಿಲ್ಲ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಜೈಲಿನಲ್ಲಿ ಕನಿಷ್ಠ ಮೂಲಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್‌ ಕಾಣಿಸಿಕೊಂಡಿದೆ (ಚರ್ಮದ ಅಲರ್ಜಿ). ಬೇರೆ ಯಾರಿಗೂ ಬೇಡ; ನನಗೆ ಮಾತ್ರ ವಿಷ ನೀಡಲಿ. ಈ ಸಂಬಂಧ ಕೋರ್ಟ್‌ ಆದೇಶ ನೀಡಲಿ...’ ಎಂದು ಸೆ.9ರಂದು ನಡೆದ ವಿಚಾರಣೆ ವೇಳೆ ದರ್ಶನ್ ಅವರು ನ್ಯಾಯಾಧೀಶರ ಎದುರು ಅಲವತ್ತುಕೊಂಡಿದ್ದರು. ಜೈಲಿನ ಕೈಪಿಡಿಯಂತೆ ಸೌಲಭ್ಯ ಕಲ್ಪಿಸಬಹುದು ಎಂದು ನ್ಯಾಯಾಲಯ ಹೇಳಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.