ADVERTISEMENT

ರೇಣುಕಸ್ವಾಮಿ ಕೊಲೆ: ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆ‌ಗೆ ನಟ ದರ್ಶನ್‌ ಹಾಜರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 19:02 IST
Last Updated 24 ಫೆಬ್ರುವರಿ 2026, 19:02 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋ‍ಪಿಗಳಾದ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಮಂಗಳವಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು.

ಪ್ರಕರಣದಲ್ಲಿ ವೆಂಕಟೇಶ್‌ ಎಂಬ ಸಾಕ್ಷಿದಾರನನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಳ್ಳಲಾಯಿತು. ನಂತರ ಇತರೆ ಇಬ್ಬರು ಸಾಕ್ಷಿದಾರರನ್ನು ವಿಚಾರಣೆಗೆ ಕರೆಸಲು ಸಮನ್ಸ್‌ ಜಾರಿ ಮಾಡಲಾಯಿತು. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್‌ 2ಕ್ಕೆ ಮುಂದೂಡಿದೆ.

ಪ್ರಮಾಣ ಪತ್ರ ಸಲ್ಲಿಸಲು ಸೂಚನೆ: ‘ಬೇರೆಡೆ ಮೊಬೈಲ್ ಜಪ್ತಿ ಮಾಡಿ, ಠಾಣೆಯಲ್ಲಿ ಜಪ್ತಿ ಮಾಡಿದ್ದಾಗಿ ತನಿಖಾಧಿಕಾರಿಗಳು ಹೇಳಿದ್ದಾರೆ. ಠಾಣೆ ಭೇಟಿಗೆ ಅವಕಾಶ ನೀಡಬೇಕು’ ಎಂದು ಪ್ರಕರಣದ 3ನೇ ಆರೋಪಿ ಪವನ್‌ ಪರ ವಕೀಲ ಡಿ.ಎಸ್‌. ಸುಧನ್ವ ನ್ಯಾಯಾಧೀಶರಲ್ಲಿ ಕೋರಿದರು.

ADVERTISEMENT

ಅದಕ್ಕೆ ನ್ಯಾಯಾಧೀಶರು, ಪೊಲೀಸ್ ಠಾಣೆ ಸಾರ್ವಜನಿಕ ಸ್ಥಳ ಅಗಿದ್ದು, ಅಲ್ಲಿ ಯಾರು ಬೇಕಾದರೂ ಭೇಟಿ ಮಾಡಬಹುದು ಎಂದರು.

‘ಸಹೋದ್ಯೋಗಿಯೊಬ್ಬರು ಸೋಮವಾರ ಠಾಣೆಗೆ ಹೋಗಿದ್ದರು. ಪೊಲೀಸ್ ಅಧಿಕಾರಿಗಳು ಒಳಗೆ ಬಿಟ್ಟಿಲ್ಲ. ಹಿರಿಯ ಅಧಿಕಾರಿಗಳ ಸೂಚನೆ ಇರುವುದರಿಂದ ಪ್ರವೇಶ ನಿರಾಕರಿಸಲಾಗಿದೆ ಎಂದಿದ್ದಾರೆ. ಆದ್ದರಿಂದ ಠಾಣೆಗೆ ಭೇಟಿ ನೀಡಲು ಅವಕಾಶ ನೀಡಿ’ ಎಂದು ಸುಧನ್ವ ಅವರು ಕೋರಿದರು.

ಬಳಿಕ ನ್ಯಾಯಾಧೀಶರು, ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.