ADVERTISEMENT

Renukaswamy Murder: ವಿಶೇಷ ಆತಿಥ್ಯ ನೀಡಿದರೆ ತಕ್ಷಣ ಅಮಾನತು: SC ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 1:14 IST
Last Updated 15 ಆಗಸ್ಟ್ 2025, 1:14 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ದರ್ಶನ್‌ ಹಾಗೂ ಇತರ ಆರೋಪಿಗಳಿಗೆ ಜಾಮೀನು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಗುರುವಾರ ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠ ತೀಕ್ಷ್ಣವಾದ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಆ ಅಭಿಪ್ರಾಯಗಳು ಹೀಗಿವೆ:

  1. ಆರೋಪಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ. ಈ ತೀರ್ಪು ನ್ಯಾಯದಾನ ವ್ಯವಸ್ಥೆಗೆ ಒಂದು ಬಲವಾದ ಸಂದೇಶ ನೀಡುತ್ತದೆ. ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಅಥವಾ ಫೈವ್‌ ಸ್ಟಾರ್‌ ಆತಿಥ್ಯ ದೊರೆಯುತ್ತಿದೆ ಎಂದು ನಮಗೆ ಗೊತ್ತಾದ ಕ್ಷಣವೇ ಜೈಲು ಅಧೀಕ್ಷಕ ಸೇರಿದಂತೆ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು.

  2. ಆರೋಪಿಯ ವರ್ತನೆ, ಪ್ರಭಾವ, ಜೈಲಿನ ನಿಯಮಗಳ ಉಲ್ಲಂಘನೆ ಹಾಗೂ ಆರೋಪಗಳ ಗಾಂಭೀರ್ಯವು ಅವರು ಜಾಮೀನಿಗೆ ಅರ್ಹವಾಗಿಲ್ಲ ಎಂಬುದನ್ನು ಸೂಚಿಸುತ್ತವೆ.

    ADVERTISEMENT
  3. ಪ್ರಸ್ತುತ ಪ್ರಕರಣದಲ್ಲಿ ದರ್ಶನ್‌ (ಎರಡನೇ ಆರೋಪಿ) ಅವರ ಸ್ಥಿತಿಗತಿಯನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಜಾಮೀನು ಮಂಜೂರು ಮಾಡಿರುವ ಆದೇಶವು ವಿವೇಚನಾ ಅಧಿಕಾರದ ಮತಿಗೆಟ್ಟ ದುರುಪಯೋಗ ಮತ್ತು ಕಾನೂನಾತ್ಮಕವಾಗಿ ಒಪ್ಪಲಾಗದಂತಹದ್ದು.

  4. ನಾವು ಜಾಮೀನು ಮಂಜೂರು ಹಾಗೂ ರದ್ದತಿ ಎರಡನ್ನೂ ಪರಿಗಣಿಸಿದ್ದೇವೆ. ಈ ಪ್ರಕರಣದಲ್ಲಿ ಹೈಕೋರ್ಟ್‌ನ ತೀರ್ಪು ಗಂಭೀರ ಕಾನೂನು ನ್ಯೂನತೆಗಳನ್ನು ಒಳಗೊಂಡಿದೆ. ಈ ತೀರ್ಪು ಸೆಕ್ಷನ್‌ 302, 120ಬಿ ಮತ್ತು 34 ಸೆಕ್ಷನ್‌ಗಳ ಅಡಿಯಲ್ಲಿ ಜಾಮೀನು ಮಂಜೂರು ಮಾಡಲು ಯಾವುದೇ ವಿಶೇಷ ಅಥವಾ ಸ್ಪಷ್ಟ ಕಾರಣ ದಾಖಲಿಸಲು ವಿಫಲವಾಗಿದೆ.

  5. ಇಂತಹ ಪ್ರಕರಣಗಳಲ್ಲಿ ಅಪರಾಧದ ಸ್ವರೂಪ ಮತ್ತು ಆಳ, ಆರೋಪಿಯ ಪಾತ್ರ ಮತ್ತು ವಿಚಾರಣೆಯಲ್ಲಿ ಮಧ್ಯಪ್ರವೇಶ ಮಾಡುವ ಅಪಾಯಗಳನ್ನು ಅರ್ಥ ಮಾಡಿಕೊಳ್ಳದೆ ಜಾಮೀನು ನೀಡುವುದು ವಿವೇಚನಾ ಅಧಿಕಾರದ ದುರುಪಯೋಗಕ್ಕೆ ಕಾರಣವಾಗುತ್ತದೆ.

  6. ಜನಪ್ರಿಯತೆಯು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಕವಚವಾಗಲು ಸಾಧ್ಯವಿಲ್ಲ .

  7.  ಜಾಮೀನು ದೊರೆತ ತಕ್ಷಣವೇ 2ನೇ ಆರೋಪಿಯು ಸಾರ್ವಜನಿಕ ಕಾರ್ಯಕ್ರಮಗಳಿಗೆ ಮರಳಿರುವುದು, ವಿಚಾರಣಾ ಸಾಕ್ಷಿಗಳೊಂದಿಗೆ ವೇದಿಕೆ ಹಂಚಿಕೊಂಡಿರುವುದು, ಪೊಲೀಸ್‌ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿರುವುದು... ಇವೆಲ್ಲವೂ ವಿಚಾರಣೆಯ ಸಮಗ್ರತೆಗೆ ಬೆದರಿಕೆ ಒಡ್ಡುತ್ತವೆ.

  8. ಸೆಲೆಬ್ರಿಟಿಗಳು ಸಮಾಜದಲ್ಲಿ ಮಾದರಿಯಾಗಿರುತ್ತಾರೆ. ಅವರು ತಮ್ಮ ಪ್ರಸಿದ್ಧಿಯಿಂದ ಸಾಮಾಜಿಕ ಮೌಲ್ಯಗಳ ಮೇಲೆ ಗಣನೀಯ ಪ್ರಭಾವ ಬೀರುತ್ತಾರೆ. ಅಂತಹ ವ್ಯಕ್ತಿಯು ಸಂಚುಗಾರಿಕೆ ಮತ್ತು ಹತ್ಯೆಯಂತಹ ಗಂಭೀರ ಆರೋಪಗಳನ್ನು ಹೊಂದಿದ್ದರೂ ಅವರನ್ನು ಸಡಿಲ ಬಿಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ.

  9. ಸಾಕ್ಷಿಗಳ ಮೇಲೆ ಬೆದರಿಕೆ, ವಿಧಿವಿಜ್ಞಾನ ಮತ್ತು ಪ್ರತ್ಯಕ್ಷ ಸಾಕ್ಷಿಗಳ ಮೇಲೆ ಒತ್ತಡವು ಜಾಮೀನಿನ ರದ್ದತಿಯ ಅಗತ್ಯತೆಯನ್ನು ಒತ್ತಿ ಹೇಳುತ್ತಿವೆ.

  10. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಯು ತನ್ನ ಸಾಮಾಜಿಕ ಸ್ಥಿತಿಗತಿ ಅಥವಾ ಆರ್ಥಿಕ ಸ್ಥಿತಿಗತಿಯ ಕಾರಣದಿಂದ ಕಾನೂನಾತ್ಮಕ ಉತ್ತರದಾಯಿತ್ವದಿಂದ ಹೊರಗಿರಲು ಸಾಧ್ಯವಿಲ್ಲ .

  11. ಸಾಕ್ಷಿಗಳ ವಿಶ್ವಾಸಾರ್ಹತೆ ಮತ್ತು ಅವಲಂಬನೆಯನ್ನು ವಿಶ್ಲೇಷಿಸುವ ಅಧಿಕಾರವಿರುವುದು ವಿಚಾರಣಾ ನ್ಯಾಯಾಲಯಕ್ಕೆ ಮಾತ್ರ.

  12. ಈ ಪ್ರಕರಣದ ಗಾಂಭೀರ್ಯ ಪರಿಗಣಿಸಿ, ವಿಚಾರಣೆ ತ್ವರಿತಗೊಳಿಸಬೇಕು ಮತ್ತು ಕಾನೂನಾತ್ಮಕವಾಗಿ ಸೂಕ್ತ ತೀರ್ಪು ನೀಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.