
ನವದೆಹಲಿ: ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ವಿಶೇಷ ಮೇಲ್ಮನವಿ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರ್ಧರಿಸಿದೆ.
ಅರ್ಜಿದಾರ ಎಚ್.ಎಸ್.ಗೌರವ್ ಪರವಾಗಿ ವಕೀಲ ಸುಘೋಷ್ ಸುಬ್ರಹ್ಮಣ್ಯಂ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ನೇತೃತ್ವದ ಪೀಠದ ಮುಂದೆ ಈ ಅರ್ಜಿಯನ್ನು ಉಲ್ಲೇಖಿಸಿದರು.
‘ಇದೇ 22ರಂದು ದಸರಾ ಆರಂಭವಾಗಲಿದ್ದು, ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು’ ಎಂದು ಅವರು ಕೋರಿದರು. ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ತಿಳಿಸಿದರು. ಈ ಪ್ರಕರಣವು ನ್ಯಾಯಾಲಯ–3ರಲ್ಲಿ 55ನೇ ವಿಷಯವಾಗಿ ಶುಕ್ರವಾರ ವಿಚಾರಣೆಗೆ ಬರಲಿದೆ. ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ವಕೀಲ ಡಿ.ಎಲ್.ಚಿದಾನಂದ ವಾದ ಮಂಡಿಸಲಿದ್ದಾರೆ.
‘ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೀಪ ಬೆಳಗಿಸುವುದು, ಪೂಜೆ ಮಾಡುವುದು ಮತ್ತು ಪುಷ್ಪಾರ್ಚನೆಯಂತಹ ಆಚರಣೆಗಳಲ್ಲಿ ಹಿಂದೂಯೇತರ ವ್ಯಕ್ತಿ ಭಾಗಿಯಾದರೆ ಸಂವಿಧಾನದ 25 ಮತ್ತು 26ನೇ ವಿಧಿಗಳ ಉಲ್ಲಂಘನೆಯಾಗುತ್ತದೆ. ಇದರಿಂದ ಹಿಂದೂ ಭಾವನೆಗಳಿಗೆ ನೋವುಂಟು ಆಗಲಿದೆ ಮತ್ತು ಕಾರ್ಯಕ್ರಮದ ಧಾರ್ಮಿಕ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಲಿದೆ’ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಈ ಸಂಬಂಧ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಹೈಕೋರ್ಟ್ ಇದೇ 15ರಂದು ವಜಾಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.