
ಬೆಂಗಳೂರು: ದಾವಣಗೆರೆ ಜಿಲ್ಲೆಯಲ್ಲಿ ದುಷ್ಟರು ಮತ್ತು ಶ್ರೀಮಂತರ ಕೂಟ ಸರ್ಕಾರಿ ಆಸ್ತಿಯನ್ನು ಕಬಳಿಸುತ್ತಿದ್ದು, ಹಳ್ಳ–ಕೊಳ್ಳಗಳನ್ನೂ ಬಿಡುತ್ತಿಲ್ಲ. ಇದನ್ನು ತಡೆಯುವವರೇ ಇಲ್ಲ ಎಂದು ಬಿಜೆಪಿಯ ಬಿ.ಪಿ.ಹರೀಶ್ ವಿಧಾನಸಭೆಯಲ್ಲಿ ದೂರಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಕುರಿತು ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅವರ ಕುಟುಂಬದವರು ಸುಮಾರು 550 ಎಕರೆ ಕಂದಾಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಹರಿಹರ ತಾಲ್ಲೂಕಿನ ಚಿಕ್ಕಬಿದರಿ ಹಾಗೂ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿ, ಕಡತಿ ಗ್ರಾಮಗಳಲ್ಲಿ ಶಾಮನೂರು ಶುಗರ್ಸ್ ಮತ್ತು ಸ್ಯಾಮ್ಸನ್ ಡಿಸ್ಟಿಲರೀಸ್ ಸುತ್ತಮುತ್ತ ನೂರಾರು ಎಕರೆ ಭೂಮಿಯನ್ನು ರೈತರಿಗೆ ಮೋಸ ಮಾಡಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಚಿಕ್ಕಬಿದರಿ ಗ್ರಾಮದಲ್ಲಿ ಬಯೋಫರ್ಟಿಲೈಸರ್ ಕಾರ್ಖಾನೆಗೆಂದು ಕೆಐಎಡಿಬಿ ಮೂಲಕ 100 ಎಕರೆ ಜಮೀನು ಸ್ವಾಧೀನಪಡಿಸಿಕೊಂಡರು. ಆದರೆ, ಈವರೆಗೆ ರೈತರಿಗೆ ಪರಿಹಾರ ನೀಡಿಲ್ಲ ಎಂದು ದೂರಿದರು.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಕಾರ್ಖಾನೆ ಸ್ಥಾಪಿಸಲು 122 ಎಕರೆ ಜಮೀನನ್ನು ರೈತರಿಗೆ ಮಾಹಿತಿ ನೀಡದೆ, ಬೆಂಗಳೂರಿನ ಕೆಐಎಡಿಬಿ ಕಚೇರಿಯಲ್ಲಿ ರೈತರ ನಕಲಿ ಸಹಿಗಳನ್ನು ಹಾಕಿಸುವ ಮೂಲಕ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದರು.
‘ಈ ಕುರಿತು ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆದರೂ ಏನೂ ಆಗಿಲ್ಲ. ಭೂಅತಿಕ್ರಮಣವನ್ನು ತಡೆಯುವ ಶಕ್ತಿ ಜಿಲ್ಲಾ ಆಡಳಿತಕ್ಕೆ ಇಲ್ಲವೇ? ಮುಖ್ಯಮಂತ್ರಿಗಳ ಅಭಯ ಇದೆ ಎಂದು ಜಿಲ್ಲಾ ಉಸ್ತವಾರಿ ಸಚಿವರು ಬೇಕಾದದ್ದನ್ನು ಮಾಡುತ್ತಿದ್ದಾರೆಯೆ’ ಎಂದು ಪ್ರಶ್ನಿಸಿದರು.
ಮಾತು ಮುಗಿಸಿದ ಹರೀಶ್ ಅವರು ತಮ್ಮ ಬಳಿಯಿದ್ದ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ದಾಖಲೆಗಳನ್ನು ಕಳುಹಿಸಿದರು. ಈ ವೇಳೆ ಸದನದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.