ADVERTISEMENT

ಮರಾಠಿಯಲ್ಲಿ ಕಾರ್ಯಕ್ರಮ; ವರದಿ ಸಲ್ಲಿಸಲು ಡಿ.ಸಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 14:40 IST
Last Updated 1 ಫೆಬ್ರುವರಿ 2020, 14:40 IST

ಬೆಳಗಾವಿ: ಇಲ್ಲಿಗೆ ಸಮೀಪದ ಯಳ್ಳೂರು ಗ್ರಾಮದ ರಾಜಹಂಸಗಢದ ಕೋಟೆಯಲ್ಲಿ ಇತ್ತೀಚೆಗೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಮರಾಠಿಯಲ್ಲಿ ಆಯೋಜಿಸಲಾಗಿತ್ತು ಎನ್ನುವ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅವರು, ಕಾರ್ಯಕ್ರಮದ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಉಪವಿಭಾಗಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಅವರಿಗೆ ನೋಟಿಸ್‌ ನೀಡಿದ್ದಾರೆ.

ಸ್ಥಳೀಯ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಅಧ್ಯಕ್ಷತೆಯಲ್ಲಿ ಈ ಸಮಾರಂಭ ನಡೆದಿತ್ತು. ಕಾರ್ಯಕ್ರಮದ ಬ್ಯಾನರ್‌ ಸಂಪೂರ್ಣವಾಗಿ ಮರಾಠಿ ಭಾಷೆಯಲ್ಲಿ ಬರೆಯಸಲಾಗಿತ್ತು. ಅಲ್ಲಿ ಪಾಲ್ಗೊಂಡ ಎಲ್ಲ ಪ್ರಮುಖ ಮುಖಂಡರು ಕೂಡ ಮರಾಠಿಯಲ್ಲಿ ಮಾತನಾಡಿದ್ದರು. ಇದನ್ನು ಖಂಡಿಸಿ, ಹಲವು ಕನ್ನಡ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು.

ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ ಹಾಗೂ ಕೋಟೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ₹3.5 ಕೋಟಿ ಅನುದಾನ ಪಡೆದುಕೊಂಡು, ಮರಾಠಿ ಮತದಾರರನ್ನು ಸೆಳೆಯಲು ಶಾಸಕಿ ಲಕ್ಷ್ಮಿ ಅವರು ಮರಾಠಿ ಭಾಷೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು ಎಂದು ಕಿಡಿಕಾರಿದ್ದರು. ಇದಲ್ಲದೇ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಟಿ.ಎಸ್‌. ನಾಗಾಭರಣ ಅವರು ಕೂಡ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು, ತಕ್ಷಣ ಕ್ರಮಕೈಗೊಳ್ಳುವಂತೆ ತಿಳಿಸಿದ್ದರು.

ADVERTISEMENT

ಪ್ರತಿಕ್ರಿಯಿಸಲಾರೆ– ವಿದ್ಯಾವತಿ ಭಜಂತ್ರಿ:‘ಜಿಲ್ಲಾಧಿಕಾರಿಯವರು ನೋಟಿಸ್‌ ನೀಡಿದ್ದು ನಿಜ. ಹೆಚ್ಚೇನೂ ಹೇಳಲಾರೆ. ನನ್ನ ಗಂಟಲಿಗೆ ಸೋಂಕು ತಗುಲಿದ್ದು, ಮಾತನಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.