ADVERTISEMENT

ಸಚಿವರೂ ರಾಜೀನಾಮೆಗೆ ಸಿದ್ಧರಿದ್ದಾರೆ: ಉಪಮುಖ್ಯಮಂತ್ರಿ ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 5:53 IST
Last Updated 2 ಜುಲೈ 2019, 5:53 IST
   

ತುಮಕೂರು: ಸಚಿವ ಸ್ಥಾನಕ್ಕಾಗಿ ಶಾಸಕರಲ್ಲಿ ಅತೃಪ್ತಿ ಇದ್ದರೆ, ಸ್ಥಾನ ಬಿಟ್ಟು ಕೊಡಲು ಕೆಲವು ಹಿರಿಯ ಸಚಿವರು ಸಹ ಸಿದ್ಧರಿದ್ದಾರೆ, ಹೈಕಮಾಂಡ್‌ನಿಂದ ಸೂಚನೆ ಬಂದರೆ ಮಾತ್ರ ಬದಲಾವಣೆ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಅವರು ಮಂಗಳವಾರ ಬೆಳಿಗ್ಗೆ ಮಾತನಾಡಿದರು.

ಆನಂದ್ ಸಿಂಗ್ ಮತ್ತು ರಮೇಶ್ ಅವರ ರಾಜೀನಾಮೆಗೆ ಸ್ಪಷ್ಟ ಕಾರಣ ನಮಗೆ ತಿಳಿದಿಲ್ಲ.ರಾಜೀನಾಮೆ ಕೊಟ್ಟಿರುವ ಇಬ್ಬರೂ ಬಿಜೆಪಿಯ ಸಂಪರ್ಕದಲ್ಲಿ ಇದ್ದರು. ಜಿಂದಾಲ್ ಕಂಪನಿಗೆ ಜಮೀನು ಕೊಡುವ ವಿಷಯದಲ್ಲಿ ಆನಂದ್ ಅವರಿಗೆ ಮನಸ್ತಾಪ ಇದ್ದರೆ ಸಂಪುಟ ಉಪ ಸಮಿತಿಯೊಂದಿಗೆ ಚರ್ಚಿಸಬೇಕಿತ್ತು. ಸಾಧಕ ಬಾಧಕಗಳ ಕುರಿತು ಆಲೋಚಿಸಬೇಕಿತ್ತು. ಆ ಜಮೀನನ್ನು ಕೊಡುವ ವಿಚಾರ ಯಾರ ಕಾಲದಲ್ಲಿ ಪ್ರಸ್ತಾಪವಾಯಿತು, ಯಾಕೆ ಆಯಿತು ಎಂಬ ಅಧ್ಯಯನವನ್ನು ಆನಂದ್ ಅವರು ಮಾಡಬೇಕಿತ್ತು ಎಂದು ಹೇಳಿದರು.

ADVERTISEMENT

ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ಆ ಪಕ್ಷದ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಸಮಯ ಬಂದಾಗ ಅವರನ್ನು ಬರಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಅಧಿಕಾರಕ್ಕಾಗಿ ಪ್ರತಿಯೊಬ್ಬರು ರಣನೀತಿ ರೂಪಿಸುತ್ತಾರೆ. ಈ ರಾಜೀನಾಮೆಯ ಹಿಂದೆ ಬಿಜೆಪಿಯ ಕೈವಾಡ ಇದೆ. ಸಿ.ಎಂ. ವಿದೇಶಕ್ಕೆ ಹೋಗಿರುವಾಗಲೇ ಈ ರಾಜಕೀಯ ಬೆಳವಣಿಗೆ ನಡೆದಿರುವುದು ಕಾಕತಾಳಿಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.