ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ (ಡಿಡಿಯುಟಿಟಿಎಲ್) ನಡೆದಿದೆ ಎನ್ನಲಾದ ₹47.50 ಕೋಟಿ ಅಕ್ರಮ ಆರೋಪದ ಪ್ರಕರಣದಲ್ಲಿ ನಿಗಮದ ಮಾಜಿ ಅಧ್ಯಕ್ಷರೂ ಆದ, ಬಿಜೆಪಿ ಮುಖಂಡ ಡಿ.ಎಸ್.ವೀರಯ್ಯ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಈ ಕುರಿತಂತೆ ವೀರಯ್ಯ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ (ಸಿಸಿಎಚ್–42) ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಬುಧವಾರ ಮಾನ್ಯ ಮಾಡಿ ಆದೇಶಿಸಿದರು.
‘ಅರ್ಜಿದಾರರು 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ನೀಡಬೇಕು, ಪಾಸ್‌ಪೋರ್ಟ್ ಒಪ್ಪಿಸಬೇಕು’ ಎಂಬುದೂ ಸೇರಿದಂತೆ ಇತರೆ ಷರತ್ತುಗಳನ್ನು ವಿಧಿಸಲಾಗಿದೆ. ಅರ್ಜಿದಾರರ ಪರ ಹೈಕೋರ್ಟ್‌ನ ಹಿರಿಯ ವಕೀಲ ಎಂ.ಎಸ್.ಶ್ಯಾಮಸುಂದರ್ ಹಾಗೂ ಡಾ.ಪಿ.ಎಲ್.ವಂದನಾ ವಾದ ಮಂಡಿಸಿದ್ದರು.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿನ ಪಾರದರ್ಶಕತೆ ಕಾಯ್ದೆ ಉಲ್ಲಂಘಿಸಿ ತುಂಡು ಗುತ್ತಿಗೆ ನೀಡಿದ ಆರೋಪದಡಿ ವೀರಯ್ಯ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 120 ಬಿ, 409, 420,465, 468 ಮತ್ತು 471ರ ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವೀರಯ್ಯ ಅವರನ್ನು ಇದೇ 12ರಂದು ಬಂಧಿಸಿ 13ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಎರಡು ದಿನಗಳ ಪೊಲೀಸ್ ಕಸ್ಟಡಿ ನಂತರ ಇದೇ 16ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.