ADVERTISEMENT

ಸಿಡಿಪಿ ತಯಾರಿಸಲು ಸೆ.30 ಗಡುವು: ಬೈರತಿ ಬಸವರಾಜ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 20:22 IST
Last Updated 19 ಆಗಸ್ಟ್ 2021, 20:22 IST
ಬೈರತಿ ಬಸವರಾಜ್‌
ಬೈರತಿ ಬಸವರಾಜ್‌   

ಬೆಂಗಳೂರು: ‘ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳು ಸೆ. 30ರ ಒಳಗೆ ‘ಸಮಗ್ರ ಅಭಿವೃದ್ಧಿ ಯೋಜನೆ’ (ಸಿಡಿಪಿ) ತಯಾರಿಸಿ ಸಲ್ಲಿಸಬೇಕು’ ಎಂದು ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರಿಗೆ ‌ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್‌ ಗಡುವು ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರಗಳ ಅಯುಕ್ತರ ಸಭೆಯನ್ನುವಿಕಾಸಸೌಧದಲ್ಲಿ ಗುರುವಾರ ನಡೆಸಿದ ಅವರು, ‘ನಿಮ್ಮ ವ್ಯಾಪ್ತಿಯ ನಗರ, ಬಡಾವಣೆಗಳು, ಕೆರೆಗಳ ಅಭಿವೃದ್ಧಿ ಸೇರಿದಂತೆ ಇತರ ಯೋಜನೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಸಿಡಿಪಿಯನ್ನು ನಗರಾಭಿವೃದ್ಧಿ ಇಲಾಖೆ ಮತ್ತು ನಗರ ಹಾಗೂ ಗ್ರಾಮಾಂತರ ಯೋಜನಾ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು’ ಎಂದು ಸೂಚಿಸಿದರು.

‘ಅಭಿವೃದ್ಧಿ ಯೋಜನೆ ವಿಚಾರದಲ್ಲಿ ಪ್ರಕರಣಗಳು ಇರುವ ನಗರಾಭಿವೃದ್ಧಿ ಪ್ರಾಧಿಕಾರಗಳು ನವೆಂಬರ್ ತಿಂಗಳ ಅಂತ್ಯದೊಳಗೆ ಸಲ್ಲಿಸಬೇಕು’ ಎಂದು ಅವರು ತಿಳಿಸಿದರು.

ADVERTISEMENT

‘ಕೆಲವು ಪ್ರಾಧಿಕಾರಗಳ ಸುಪರ್ದಿಯಲ್ಲಿರುವ ಮೂಲೆ ಮತ್ತು ಮಧ್ಯಂತರ ನಿವೇಶನಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಬೇಕು. ಆ ಮೂಲಕ, ಪ್ರಾಧಿಕಾರಕ್ಕೆ ಆದಾಯ ಬರಲಿದೆ. ಅಲ್ಲದೆ, ಹೊಸ ಬಡಾವಣೆ ನಿರ್ಮಾಣಕ್ಕೆ ಒತ್ತು ನೀಡುವ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರಗಳ ಸಂಪನ್ಮೂಲ ಹೆಚ್ಚಿಸಬಹುದು ಮತ್ತು ಪ್ರಾಧಿಕಾರದ ನಿರ್ವಹಣೆಗೆ ಅನುಕೂಲ ಆಗಲಿದೆ’ ಎಂದು ಸಲಹೆ ನೀಡಿದರು.

‘ಕಾನೂನು ತೊಡಕುಗಳಿದ್ದರೆ ಇಲಾಖೆಯ ಕಾರ್ಯದರ್ಶಿ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಿವಾರಿಸಿಕೊಳ್ಳಬೇಕು’ ಎಂದೂ ಸೂಚಿಸಿದರು.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಂ.ಎನ್. ಅಜಯ್ ನಾಗಭೂಷಣ್‌, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯದ ನಿರ್ದೇಶಕ ‌ಎಲ್. ಶಶಿಕುಮಾರ್, ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.