ADVERTISEMENT

ದೋಣಿ ದುರಂತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ

ಕಾರವಾರದ ಬಳಿ ಅರಬ್ಬಿ ಸಮುದ್ರದಲ್ಲಿ ದೋಣಿ ದುರಂತದಲ್ಲಿ ಶಿಗ್ಗಾವಿ ತಾಲ್ಲೂಕಿನ ಹೊಸೂರ ಗ್ರಾಮದ ಒಂದೇ ಕುಟುಂಬದ 7 ಜನರ ಸಾವು

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 10:08 IST
Last Updated 23 ಜನವರಿ 2019, 10:08 IST
ಕಾರವಾರದ ಕೂರ್ಮಗಡ ದ್ವೀಪದ ಬಳಿ ಅರಬ್ಬಿ ಸಮುದ್ರದಲ್ಲಿ ಸೋಮವಾರ ಸಂಭವಿಸಿದ ದೋಣಿ ದುರಂತದಲ್ಲಿ  ಮೃತಪಟ್ಟವರ ತಾಲ್ಲೂಕಿನ ಹೊಸೂರ ಗ್ರಾಮದ ಮನೆಗೆ ಬುಧವಾರ ಭೇಟಿ ನೀಡಿದ ಶಾಸಕ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದರು 
ಕಾರವಾರದ ಕೂರ್ಮಗಡ ದ್ವೀಪದ ಬಳಿ ಅರಬ್ಬಿ ಸಮುದ್ರದಲ್ಲಿ ಸೋಮವಾರ ಸಂಭವಿಸಿದ ದೋಣಿ ದುರಂತದಲ್ಲಿ  ಮೃತಪಟ್ಟವರ ತಾಲ್ಲೂಕಿನ ಹೊಸೂರ ಗ್ರಾಮದ ಮನೆಗೆ ಬುಧವಾರ ಭೇಟಿ ನೀಡಿದ ಶಾಸಕ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದರು    

ಶಿಗ್ಗಾವಿ: ಕಾರವಾರದ ಕೂರ್ಮಗಡ ದ್ವೀಪದ ಬಳಿ ಅರಬ್ಬಿ ಸಮುದ್ರದಲ್ಲಿ ಸೋಮವಾರ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟ ತಾಲ್ಲೂಕಿನ ಹೊಸೂರ ಗ್ರಾಮದ ಒಂದೇ ಕುಟುಂಬದ 7 ಜನರ ಪಾರ್ಥೀವ ಶರೀರವು ಮಂಗಳವಾರ ತಡರಾತ್ರಿ ಸ್ವಗ್ರಾಮಕ್ಕೆ ಬಂದಿದ್ದು, ಬುಧವಾರ ನಸುಕಿನಲ್ಲಿ ಅಂತ್ಯಸಂಸ್ಕಾರ ನಡೆಯಿತು.

ಘಟನೆಯ ಸುದ್ದಿ ತಿಳಿದ ಗ್ರಾಮಸ್ಥರೆಲ್ಲ ಮಂಗಳವಾರವೇ ಮೃತರ ಮನೆ ಮುಂದೆ ಸೇರಿದ್ದು, ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಪರಶುರಾಮರ ಬೆಳವಲಕೊಪ್ಪ ಅವರ ತಾಯಿ ಕಾಶವ್ವ ಅಳುತ್ತಿದ್ದ ದೃಶ್ಯವು ಮನಕಲಕುವಂತಿತ್ತು. ಇಲ್ಲಿನ ಪರಶುರಾಮ ಬೆಳವಲಕೊಪ್ಪ ಹಾಗೂ ಆತನ ಪತ್ನಿ, ಮಗಳು ಮತ್ತು ಸಹೋದರನ ಪತ್ನಿ ಮತ್ತು ಅವರುಮೂವರು ಮಕ್ಕಳು ಅಸುನೀಗಿದ್ದರು.

ಪರಶುರಾಮ ಅವರ ಪುತ್ರ, 10 ವರ್ಷದ ಗಣೇಶ ಬೆಳವಲಕೊಪ್ಪ ಘಟನೆಯಲ್ಲಿ ಪವಾಡ ಸದೃಶವಾಗಿ ಪಾರಾಗಿದ್ದನು. ತಂದೆ–ತಾಯಿ, ಅಕ್ಕನನ್ನು ಕಳೆದುಕೊಂಡ ಆತನು ದಿಗ್ಭ್ರಾಂತನಾದಂತೆ ಕಂಡು ಬಂದನು.

ADVERTISEMENT

ಸಾಂತ್ವನ ಹೇಳಲು ಬಂದಿದ್ದ ಸಂಬಂಧಿಕರು, ಗ್ರಾಮಸ್ಥರೂ ದುಃಖತಪ್ತರಾಗಿ ಮೌನಕ್ಕೆ ಶರಣಾಗಿದ್ದರು. ‘ಜಾತ್ರೆಗೆ ಹೋಗಿ ಬರುವುದಾಗಿ ಹೇಳಿದ ಮಗ, ಸೊಸೆ, ಮೊಮ್ಮಕ್ಕಳು ಮಸಣ ಸೇರಿದರು. ಬಾರದಾ ಲೋಕದ ದಾರಿ ಹಿಡಿದರು’ ಎಂದು ತಾಯಿ ಕಾಶವ್ವ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಪತ್ನಿ ತಮ್ಮನಿಗೆ ಶಬರಿಮಲೆಯ ಪ್ರಸಾದವನ್ನು ಕೊಟ್ಟು, ಕೂರ್ಮಗಡದ ನರಸಿಂಹ ದೇವರ ಜಾತ್ರೆ ಮುಗಿಸಿಕೊಂಡು ಬರುವುದಾಗಿ ಹೇಳಿ ಪರಶುರಾಮ ಬೆಳವಲಕೊಪ್ಪ ಸೇರಿದಂತೆ ಕುಟುಂಬದ 10 ಜನರು ಹೋಗಿದ್ದರು. ಘಟನೆಯಲ್ಲಿ ಏಳು ಮಂದಿ ಅಸುನೀಗಿದರೆ, ಇಬ್ಬರ ಪತ್ತೆಗಾಗಿ ಶೋಧ ನಡೆದಿದೆ. ಬಾಲಕ ಗಣೇಶ ಪಾರಾಗಿದ್ದನು.

ಬೊಮ್ಮಾಯಿ ಭೇಟಿ
ಶಾಸಕ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಮೃತರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಪರಿಹಾರ ಮತ್ತಿತರ ಬೆಂಬಲಗಳನ್ನು ಕೊಡಿಸಲು ಸಹಕರಿಸುವುದಾಗಿ ತಿಳಿಸಿದರು.

ಪರಿಹಾರದ ಭರವಸೆ
ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಎಲ್ಲ ಪರಿಹಾರವನ್ನು ಜಿಲ್ಲಾಡಳಿತದ ಮೂಲಕ ನೀಡಲಾಗುವುದು ಎಂದು ಸಂತಾಪ ಸೂಚಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್ ಹಾಗೂ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.