ADVERTISEMENT

ತೊಟ್ಟಿಯಲ್ಲಿ ಬಾಲಕಿ ಶವ; ಮನೆ ಮಾಲೀಕ ಸೆರೆ

ಪೊಲೀಸರು ಬರುವ ತನಕ ಮೃತದೇಹ ಮೇಲೆತ್ತಲು ಬಿಡದ ಮಾಲೀಕರ ಕುಟುಂಬ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:27 IST
Last Updated 7 ಮೇ 2019, 20:27 IST
ಪೊಲೀಸ್ ವಶದಲ್ಲಿ ಮನೆ ಮಾಲೀಕರ ಕುಟುಂಬ
ಪೊಲೀಸ್ ವಶದಲ್ಲಿ ಮನೆ ಮಾಲೀಕರ ಕುಟುಂಬ   

ಬೆಂಗಳೂರು: ರಾಜಗೋಪಾಲನಗರ ಸಮೀಪದ ಗಣಪತಿನಗರದಲ್ಲಿ ಮಂಗಳವಾರ ಬೆಳಿಗ್ಗೆ ತಾಯಿ ಜತೆ ಮನೆಗೆಲಸಕ್ಕೆ ತೆರಳಿದ್ದ ಜ್ಯೋತಿ (13) ಎಂಬ ಬಾಲಕಿ ನೀರಿನ ತೊಟ್ಟಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

‘ತೊಟ್ಟಿಯಲ್ಲಿ ಮಗಳು ಬಿದ್ದಿದ್ದರೂ, ಪೊಲೀಸರು ಬರುವವರೆಗೂ ಆಕೆಯನ್ನು ಮೇಲೆತ್ತಲು ಮಾಲೀಕರು ಬಿಡಲಿಲ್ಲ’ ಎಂದು ಪೋಷಕರುಆರೋಪಿಸಿದ್ದಾರೆ.

ಪೋಷಕರು ಕೊಟ್ಟ ದೂರಿನ ಅನ್ವಯ ಉದ್ದೇಶ‌ ಪೂರ್ವಕವಲ್ಲದ ಹತ್ಯೆ (ಐಪಿಸಿ 304) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮನೆ ಮಾಲೀಕ ಅನ್ಬುನಾಥ್ ಅಲಿಯಾಸ್ ಅಲ್ಪನಾಥ್, ಅವರ ಪತ್ನಿ ರೇಣುಕಾ ಹಾಗೂ ಬಾಮೈದ ಮುನಿಸ್ವಾಮಿ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT
ಜ್ಯೋತಿ

ಮೃತ ಬಾಲಕಿ, ಯಾದಗಿರಿ ಬುಗ್ಗಪ್ಪ, ಪಾರ್ವತಮ್ಮ ದಂಪತಿ ಮಗಳು. ಈ ಕುಟುಂಬ ಎಂಟು ತಿಂಗಳಿನಿಂದ ಗಣಪತಿನಗರದಲ್ಲಿ ನೆಲೆಸಿತ್ತು. ಮನೆ ಸಮೀಪದ ಶಾಲೆಯಲ್ಲೇ ಜ್ಯೋತಿ 6ನೇ ತರಗತಿ ಓದುತ್ತಿದ್ದಳು. ಆಕೆಯ ತಾಯಿ ಪಕ್ಕದ ರಸ್ತೆಯಲ್ಲೇ ಇರುವ ಅನ್ಬುನಾಥ್ ಮನೆಗೆ ಸ್ವಚ್ಛತಾ ಕೆಲಸಕ್ಕೆ ಹೋಗುತ್ತಿದ್ದರು.

ರಕ್ಷಿಸಲು ಬಿಡಲಿಲ್ಲ: ‘ಎಂದಿನಂತೆ ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ತೆರಳಿದ್ದೆ. ನನ್ನೊಟ್ಟಿಗೆ ಮಗಳೂ ಬಂದಿದ್ದಳು. ಮೊದಲ ಮಹಡಿಯಲ್ಲಿ ಕಸಗುಡಿಸಿ ಕೆಳಗೆ ಬಂದಾಗ, ಆಕೆ ಕಾಣಿಸಲಿಲ್ಲ. ಈ ವೇಳೆ ತೊಟ್ಟಿ ಪಕ್ಕದಲ್ಲೇ ನಿಂತಿದ್ದ ಅನ್ಬುನಾಥ್, ನಿನ್ನ ಮಗಳು ತೊಟ್ಟಿಯಲ್ಲಿ ಬಿದ್ದಿದ್ದಾಳೆ ಎಂದರು. ನಾನು ಚೀರಿಕೊಂಡು ರಕ್ಷಣೆಗೆ ಹೋದಾಗ, ಪೊಲೀಸರು ಬರುವವರೆಗೂ ಬಾಲಕಿಯನ್ನು ಮೇಲೆತ್ತಲು ಬಿಡುವುದಿಲ್ಲ ಎಂದು ಅಡ್ಡ ನಿಂತರು. ಚೀರಾಟ ಕೇಳಿ ಸ್ಥಳೀಯರೆಲ್ಲ ಬಂದರೆ, ಅವರಿಗೆ ಬೈದು ಕಳುಹಿಸಿದರು. ಜತೆಯಲ್ಲಿ ಅವರ ಪತ್ನಿ ಹಾಗೂ ಬಾಮೈದ ಕೂಡ ಇದ್ದರು’ ಎಂದು ಮೃತಳ ತಾಯಿ ಪಾರ್ವತಮ್ಮ ಆರೋಪಿಸಿದ್ದಾರೆ.

‘ಸ್ವಲ್ಪ ಸಮಯದವರೆಗೆ ಮಗಳು ತೊಟ್ಟಿಯಲ್ಲೇ ಒದ್ದಾಡುತ್ತಿದ್ದಳು. ಆ ಸದ್ದು ಹೊರಗೆ ಕೇಳಿಸುತ್ತಿತ್ತು. ಕೊನೆಗೆ ಸ್ಥಳೀಯರು ಮಾಲೀಕರನ್ನು ಎಳೆದು ಹಾಕಿ ಮಗಳನ್ನು ಮೇಲೆತ್ತಿದರು. ಅಷ್ಟರಲ್ಲಿ ಆಕೆಯ ಜೀವವೇ ಹೋಗಿತ್ತು. ಮಗಳ ಸಾವಿಗೆ ಕಾರಣರಾದ ಅನ್ಬುನಾಥ್ ಕುಟುಂಬದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಪಾರ್ವತಮ್ಮ ಮನವಿ ಮಾಡಿದ್ದಾರೆ.

ತನಿಖೆಯ ಭಯವಾಯ್ತು: ‘ನೀರು ಎಷ್ಟಿದೆ ಎಂದು ನೋಡಲು ತೊಟ್ಟಿಯಲ್ಲಿ ಇಣುಕಿದಾಗ ಜ್ಯೋತಿ ಶವ ತೇಲುತ್ತಿತ್ತು. ಆ ಕ್ಷಣ ಅಲ್ಲಿ ನನ್ನನ್ನು ಬಿಟ್ಟು ಬೇರ‍್ಯಾರು ಇರಲಿಲ್ಲ. ಹೀಗಾಗಿ, ನಾನೇ ಏನೋ ಮಾಡಿದ್ದೀನಿ ಎಂಬ ಆರೋಪವನ್ನು ತಲೆಗೆ ಕಟ್ಟಿಬಿಡುತ್ತಾರೆ ಎಂಬ ಭಯ ಶುರುವಾಯಿತು. ಹೀಗಾಗಿ, ಪೊಲೀಸರು ಬಾರದೆ ಶವ ತೆಗೆಯಲು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದೆ. ಆಕೆ ಒದ್ದಾಡುತ್ತಿದ್ದರೆ, ನಾನೇ ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ’ ಎಂದು ಅನ್ಬುನಾಥ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಮಾನವೀಯತೆ ಮರೆತರು
‘ತೊಟ್ಟಿಯಲ್ಲಿ ಐದು ಅಡಿಗಳಷ್ಟು ನೀರಿತ್ತು. ಅನ್ಬುನಾಥ್, ಬಾಲಕಿಯನ್ನು ಸುಲಭವಾಗಿ ಮೇಲೆತ್ತಬಹುದಿತ್ತು. ಆದರೆ, ಅವರು ಮಾನವೀಯತೆ ಮರೆತುಬಿಟ್ಟರು. ಅಲ್ಲದೆ, ತೊಟ್ಟಿಯನ್ನು ಮುಚ್ಚದೆ ನಿರ್ಲಕ್ಷ್ಯ ತೋರಿದ್ದರಿಂದ ಬಂಧಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

ವಾಮಾಚಾರಕ್ಕೆ ಬಲಿ: ಸಂಶಯ
‘ಅನ್ಬುನಾಥ್ ಇತ್ತೀಚೆಗೆ ಹೊಸ ಮನೆ ಕಟ್ಟಿಸಿದ್ದರು. ಈ ಮನೆಯಲ್ಲಿ ದೋಷ ಇದ್ದು, ನರಬಲಿ ಕೊಟ್ಟರೆ ಸರಿ ಹೋಗಬಹುದು’ ಎಂದು ಪದೇ ಪದೇ ಹೇಳುತ್ತಿದ್ದರು. ಅದೇ ಉದ್ದೇಶದಿಂದ ಜ್ಯೋತಿಯನ್ನು ಬಲಿ ಪಡೆದಿರುವ ಅನುಮಾನವೂ ಇದೆ. ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸಬೇಕು’ ಎಂದು ಜ್ಯೋತಿ ಚಿಕ್ಕಪ್ಪ ಮಹಾದೇವ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.