ADVERTISEMENT

ಲೆಫ್ಟಿನೆಂಟ್‌ ಜನರಲ್‌ ಬಿ.ಸಿ.ನಂದ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:00 IST
Last Updated 12 ಡಿಸೆಂಬರ್ 2018, 20:00 IST
ಬಿ.ಸಿ.ನಂದ
ಬಿ.ಸಿ.ನಂದ   

ಮಡಿಕೇರಿ: ಕೊಡಗಿನ ವೀರಸೇನಾನಿ, ಲೆಫ್ಟಿನೆಂಟ್‌ ಜನರಲ್‌ (ನಿವೃತ್ತ) ಬಿದ್ಡಂಡ ಚಂಗಪ್ಪ ನಂದ (87) ಬುಧವಾರ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಪತ್ನಿ, ನಾಲ್ವರು ಪುತ್ರಿಯರು ಇದ್ದಾರೆ.

ಅಬ್ಬಿ ಜಲಪಾತದ ರಸ್ತೆಯಲ್ಲಿರುವ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಗುರುವಾರ ಮಧ್ಯಾಹ್ನ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ADVERTISEMENT

ಸೇನೆಯ ಸೆಳೆತ: ನಂದ ಅವರು ಭೂಸೇನೆಯ ಉತ್ತರ ವಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಜಿಲ್ಲೆಗೆ ಗೌರವ ತಂದಿದ್ದರು.

ಬಿದ್ದಂಡ ಚೆಂಗಪ್ಪ– ಬೊಳ್ಳವ್ವ ಅವರ ಪುತ್ರರಾಗಿ 1931ರ ಮೇ 12ರಂದು ಜನಿಸಿದ್ದರು. ಬೊಳ್ಳವ್ವ ಅವರು ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಸಹೋದರಿ. ನಂದ ಅವರು 1951ರಿಂದ 1989ರ ವರೆಗೆ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು.

ತಂದೆ ಚಂಗಪ್ಪ ಅವರು ಕಾಮನ್‌ವೆಲ್ತ್‌ ರಾಷ್ಟ್ರಗಳಲ್ಲಿ ಶ್ರೇಷ್ಠ ಅರಣ್ಯಾಧಿಕಾರಿ ಆಗಿದ್ದರು. ಅರಣ್ಯ ಸಂರಕ್ಷಣೆಗೆ ಸಾಕಷ್ಟು ಒತ್ತು ನೀಡಿದ್ದರು. ಹೀಗಾಗಿ, ಕೊಯಮತ್ತೂರಿನ ಕಾಲೇಜು ಹಾಗೂ ಅಂಡಮಾನ್‌, ನಿಕೋಬಾರ್‌ನಲ್ಲಿ ಒಂದು ದ್ವೀಪಕ್ಕೆ ಚಂಗಪ್ಪ ಅವರ ಹೆಸರಿಡಲಾಗಿದೆ. ತಂದೆಯಂತೆ ನಂದ ಅವರೂ ದೇಶಸೇವೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದವರು.

ಡೆಹ್ರಾಡೂನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾಗ ಅವರ ಮನೆಯ ಎದುರೇ ‘ಇಂಡಿಯನ್‌ ಮಿಲಿಟರಿ ಅಕಾಡೆಮಿ’ ಇತ್ತು. ಅಲ್ಲಿಗೆ ಸೈನಿಕರು ಹಾಗೂ ಸೇನಾಧಿಕಾರಿಗಳು ಬಂದು ಹೋಗುತ್ತಿದ್ದನ್ನು ಹತ್ತಿರದಿಂದ ನೋಡಿದ್ದರು. ಕುಟುಂಬಸ್ಥರು ವೈದ್ಯನಾಗುವಂತೆ ಬಯಸಿದ್ದರೂ ನಂದ ಅವರಿಗೆ ಸೇನೆಯ ಸೆಳೆತ ಹೆಚ್ಚಾಗಿದ್ದರಿಂದ ಭಾರತೀಯ ಸೇನೆ ಸೇರಿದ್ದರು ಎಂದು ಅವರ ಒಡನಾಡಿಗಳು ನೆನಪು ಮಾಡಿಕೊಳ್ಳುತ್ತಾರೆ.

‘ಕರ್ನಾಟಕ ರಾಜ್ಯೋತ್ಸವ’ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.