ADVERTISEMENT

ಸಾಲಮನ್ನಾ ರೈತರ ಪರ: ಕುಮಾರ

ಮುಖ್ಯಮಂತ್ರಿ ಅವರದು ಹರಿಕಥೆ ಎಂದು ಬಣ್ಣಿಸಿದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 19:34 IST
Last Updated 19 ಡಿಸೆಂಬರ್ 2018, 19:34 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭಾಪತಿ ಪೀಠದ ಮುಂದೆ ಬಿಜೆಪಿ ಸದಸ್ಯರು ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭಾಪತಿ ಪೀಠದ ಮುಂದೆ ಬಿಜೆಪಿ ಸದಸ್ಯರು ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು   

ಬೆಳಗಾವಿ: ರೈತರ ಸಾಲ ಮನ್ನಾ ವಿಷಯದ ಕುರಿತ ಬಿಜೆಪಿ ಆರೋಪಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಂಕಿಅಂಶಗಳ ಸಮೇತ ಬುಧವಾರ ತಿರುಗೇಟು ನೀಡಿದರು. ಮುಖ್ಯಮಂತ್ರಿ ಭಾಷಣ ಅಂತೆ ಕಂತೆಗಳಿಂದ ಕೂಡಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಧರಣಿ ನಡೆಸಿದರು.

ವಿಧಾನಸಭೆಯಲ್ಲಿ ಬರ ಮೇಲಿನ ಚರ್ಚೆಗೆ ಉತ್ತರ ನೀಡಿದ ಕುಮಾರಸ್ವಾಮಿ, ಸಾಲ ಮನ್ನಾ ಪ್ರಕ್ರಿಯೆ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟರು. ವಿರೋಧಪಕ್ಷದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ನಡುವಿನ ಸಂಬಂಧ ಎಂತಹುದು ಎಂಬುದೂ ಗೊತ್ತಿದೆ ಎಂದು ಕಾಲೆಳೆದರು. ಈ ಮಾತಿನಿಂದ ಯಡಿಯೂರಪ್ಪ ಕೋಪಗೊಂಡರು.

ಮುಖ್ಯಮಂತ್ರಿ ಉತ್ತರ ನೀಡುವ ವೇಳೆಯಲ್ಲಿ ಯಡಿಯೂರಪ್ಪ ಅವರು ಉಮೇಶ ಕತ್ತಿ, ಗೋವಿಂದ ಕಾರಜೋಳ ಜತೆಗೆ, ‘ಕುಮಾರಸ್ವಾಮಿ ಇಲ್ಲಿ ಹೇಳುತ್ತಿದ್ದಾರೆ ಅಷ್ಟೇ. ಸಾಲ ಮನ್ನಾ ಮಾಡಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಒಪ್ಪಿಲ್ಲ’ ಎಂದರು. ಈ ಮಾತಿನಿಂದ ಕುಪಿತಗೊಂಡ ಕುಮಾರಸ್ವಾಮಿ, ‘ನಾನು ಯಾವ ಬ್ಯಾಂಕಿನ ಒಪ್ಪಿಗೆಗೆ ಕಾಯಬೇಕಿಲ್ಲ. ನನ್ನ ಸರ್ಕಾರ ಸದೃಢವಾಗಿದೆ. ಆರ್ಥಿಕ ಸ್ಥಿತಿ ಸುಭದ್ರವಾಗಿದೆ’ ಎಂದರು.

ADVERTISEMENT

ಯಡಿಯೂರಪ್ಪ, ‘ಇಲ್ಲಿ ದುರಹಂಕಾರದ ಮಾತುಗಳನ್ನು ಆಡಬೇಡಿ. ಇಲ್ಲಿಯವರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ₹50 ಕೋಟಿ ಸಾಲ ಮಾತ್ರ ಮನ್ನಾ ಆಗಿದೆ. ಒಂದೂವರೆ ಗಂಟೆಯಿಂದ ನಿಮ್ಮ ಹರಿಕತೆ ಕೇಳಿ ಸಾಕಾಗಿದೆ’ ಎಂದು ಹರಿಹಾಯ್ದರು.

ಕುಮಾರಸ್ವಾಮಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು. ಸರ್ಕಾರ ಕೂಡಲೇ ಸಾಲ ಮನ್ನಾ ಮಾಡಬೇಕು ಎಂದು ಘೋಷಣೆ ಕೂಗಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್ ಸದಸ್ಯರು ಮುಖ್ಯಮಂತ್ರಿ ಬೆಂಬಲಕ್ಕೆ ಧಾವಿಸಿದರು. ಸದನದಲ್ಲಿ ಕೋಲಾಹಲ ಜೋರಾದಾಗ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್‌ ಅವರು ಕಲಾಪವನ್ನು 20 ನಿಮಿಷ ಮುಂದೂಡಿದರು. ಬಳಿಕ ತಮ್ಮ ಕೊಠಡಿಯಲ್ಲಿ ಸಂಧಾನ ನಡೆಸಿದರು. 45 ನಿಮಿಷ ಬಿಟ್ಟು ಮತ್ತೆ ಕಲಾಪ ಆರಂಭವಾಯಿತು. ಈ ವೇಳೆಯಲ್ಲೇ ಬಿಜೆಪಿ ಸದಸ್ಯರು ಸದನದ ಹೊರಗೆ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ‘ಕುಮಾರಸ್ವಾಮಿ ಅವರು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸದಸ್ಯರು ಪ್ರಚೋದನೆಗೆ ಒಳಗಾಗುವಂತೆ ಮಾಡಿದ್ದಾರೆ’ ಎಂದು ದೂರಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದರು. ಸಭಾಧ್ಯಕ್ಷರು ಕಲಾಪವನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.

ಸುಳ್ಳಿನ ಸರಮಾಲೆ

‘ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಸುಳ್ಳಿನ ಸರಮಾಲೆ ಬಿಚ್ಚಿಟ್ಟಿದ್ದಾರೆ. ಸಾಲ ಮನ್ನಾ ಆಗದ ಕಾರಣ ಬ್ಯಾಂಕ್‌ಗಳ ಮೇಲೆ ಹರಿಹಾಯುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ‘ ಎಂದು ಬಿ.ಎಸ್‌.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

‘ಹಣಕಾಸು ಇಲಾಖೆ ಅಧಿಕಾರಿಗಳೇ ಒದಗಿಸಿದ್ದ ಸಾಲ ಮನ್ನಾ ಕುರಿತ ಮಾಹಿತಿಯನ್ನು ಚರ್ಚೆ ವೇಳೆ ಪ್ರಸ್ತಾಪಿಸಿದ್ದೆ. ಅದನ್ನು ತಿರುಚಿ ಬ್ಯಾಂಕ್‌ನವರ ಜತೆಗೆ ಸಂಪರ್ಕ ಹೊಂದಿದ್ದೇನೆ ಎಂದು ತಿಳಿಸಿ ಸದನದ ದಾರಿ ತಪ್ಪಿಸಿದ್ದಾರೆ. ಜತೆಗೆ ಕೇಂದ್ರ ಸರ್ಕಾರವನ್ನು ದೂಷಿಸಿದ್ದಾರೆ’ ಎಂದು ಕಿಡಿಕಾರಿದರು.

8 ಗಂಟೆ ಉತ್ತರ

ಬರ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಹಾಗೂ ನಾಲ್ವರು ಸಚಿವರು ಉತ್ತರ ನೀಡಿದರು. ಇಡೀ ದಿನದ ಕಲಾಪ ಉತ್ತರ ನೀಡುವುದಕ್ಕೆ ಸೀಮಿತವಾಗಿತ್ತು.

ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ, ಗಮನ ಸೆಳೆಯುವಸೂಚನೆ, ಮಸೂದೆಗಳ ಮಂಡನೆಯನ್ನು ಬದಿಗೆ ಸರಿಸಲಾಯಿತು.

ಮಧ್ಯಾಹ್ನದವರೆಗೆ ಸಚಿವರಾದ ಆರ್‌.ವಿ.ದೇಶಪಾಂಡೆ, ಕೃಷ್ಣ ಬೈರೇಗೌಡ, ಎನ್‌ ಎಚ್. ಶಿವಶಂಕರ ರೆಡ್ಡಿ ಹಾಗೂ ವೆಂಕಟರಾವ್‌ ನಾಡಗೌಡ ಉತ್ತರ ನೀಡಿದರು. ಮಧ್ಯಾಹ್ನದ ಬಳಿಕ ಮುಖ್ಯಮಂತ್ರಿ ಉತ್ತರ ನೀಡಿದರು.

ರೇವಣ್ಣ ಇಟ್ಟ ಮುಹೂರ್ತ’

ಯಡಿಯೂರಪ್ಪ ಸೇರಿದಂತೆ ವಿರೋಧ ಪಕ್ಷದ ಎಲ್ಲ ಸದಸ್ಯರ ಸಲಹೆಗಳನ್ನು ಸ್ವೀಕರಿಸಿ ಅದನ್ನು ಅಳವಡಿಸಿಕೊಳ್ಳುತ್ತೇನೆ. ಪ್ರತಿ ಟೀಕೆ ಮಾಡಲು ಹೋಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ರೀತಿಯಲ್ಲಿ ಮುಖ್ಯಮಂತ್ರಿ ಮಾತನಾಡುತ್ತಿದ್ದನ್ನು ಕಂಡ ಸಭಾಧ್ಯಕ್ಷ ರಮೇಶಕುಮಾರ್,‘ನನಗೆ ಸ್ಟ್ರೈಟ್‌ ಬ್ಯಾಟಿಂಗ್‌, ರಿವರ್ಸ್‌ ಸ್ವೀಪ್‌ ಗೊತ್ತು. ಇದೇನಿದು ಕ್ರಾಸ್ ಬ್ಯಾಟಿಂಗ್‌’ ಪ್ರಶ್ನಿಸಿದರು.

‘ನಮ್ಮ ರೇವಣ್ಣ ಇಟ್ಟ ಮುಹೂರ್ತದ ಪರಿಣಾಮ’ಎಂದು ಕುಮಾರಸ್ವಾಮಿ ನಗುತ್ತಾ ಹೇಳಿದರು. ‘ನನಗೆ ಯಡಿಯೂರಪ್ಪ ಅವರ ಮೇಲೆ ಬಹಳ ಪ್ರೀತಿ’ ಎಂದು ರೇವಣ್ಣ ಒಗ್ಗರಣೆ ಸೇರಿಸಿದರು. ‘ಸದನದಲ್ಲಿ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ನಮ್ಮ ನಾಯಕರು ಈ ಸಲ ಮೌನವಾಗಿದ್ದು ಏಕೆ ಎಂಬುದು ಈಗ ಗೊತ್ತಾಯಿತು’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಸೇರಿಸಿದರು.

ಮುಖ್ಯಮಂತ್ರಿ ಹೇಳಿದ್ದೇನು?

*44 ಲಕ್ಷ ರೈತರ ಸಾಲ ಮನ್ನಾ ಆಗಲಿದೆ. ಅದರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ 21.69 ಲಕ್ಷ ರೈತರು ಸೇರಿದ್ದಾರೆ. 1.97 ಲಕ್ಷ ರೈತರ ದಾಖಲೆ ಪರಿಶೀಲನೆ ಪೂರ್ಣಗೊಂಡಿದೆ.

*ರೈತರು ಬ್ಯಾಂಕ್‌ಗಳಿಗೆ ಆಧಾರ್‌ ಸಂಖ್ಯೆ, ಪಡಿತರ ಚೀಟಿ ಹಾಗೂ ಪಹಣಿ ನೀಡಿದರೆ ಸಾಕು. ಒಂದು ವೇಳೆ ಬ್ಯಾಂಕ್‌ಗಳಲ್ಲಿ ದಾಖಲೆ ಪರಿಶೀಲನೆ ಸಮಾಧಾನ ತಾರದಿದ್ದರೆ ತಹಶೀಲ್ದಾರ್‌ ಬಳಿ ಪರಿಶೀಲನೆ
ನಡೆಸಬಹುದು.

*ಬಡ ರೈತರಿಗೆ ಅನುಕೂಲ ಆಗಬೇಕು ಹಾಗೂ ಯೋಜನೆ ದುರ್ಬಳಕೆ ಆಗಬಾರದು ಎಂಬ ಕಾರಣಕ್ಕೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದೇವೆ.

*2.50 ಲಕ್ಷ ಎನ್‌ಪಿಎ ಖಾತೆಗಳು ಇವೆ. ಈ ಖಾತೆಗಳ ಸಾಲ ಮನ್ನಾ ಮಾಡಲು ಬ್ಯಾಂಕ್‌ಗಳಲ್ಲಿ ರಿಯಾಯಿತಿ ಕೇಳಿದ್ದೇವೆ. ಬ್ಯಾಂಕ್‌ಗಳ ಜತೆಗೆ ಚರ್ಚೆ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.