ADVERTISEMENT

ವಿಧಾನ ಪರಿಷತ್‌ ಗಲಾಟೆ ವಿಚಾರಣೆ: ಮರಿತಿಬ್ಬೇಗೌಡ ನೇತೃತ್ವದಲ್ಲಿ ಸದನ ಸಮಿತಿ

ಡಿ.15ರ ಪರಿಷತ್‌ ಗಲಾಟೆ ಕುರಿತು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 19:30 IST
Last Updated 4 ಜನವರಿ 2021, 19:30 IST
ವಿಧಾನ ಪರಿಷತ್ ಕಲಾಪ–ಸಾಂದರ್ಭಿಕ ಚಿತ್ರ
ವಿಧಾನ ಪರಿಷತ್ ಕಲಾಪ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಡಿಸೆಂಬರ್‌ 15ರಂದು ವಿಧಾನ ಪರಿಷತ್‌ ಅಧಿವೇಶನದಲ್ಲಿ ನಡೆದ ಅಹಿತಕರ ಘಟನೆ ಕುರಿತು ವಿಚಾರಣೆ ನಡೆಸಲು ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಐವರು ಸದಸ್ಯರ ಸದನ ಸಮಿತಿ ರಚಿಸಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಕಾಂಗ್ರೆಸ್‌ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಆರ್‌.ಬಿ. ತಿಮ್ಮಾಪೂರ ಮತ್ತು ಬಿಜೆಪಿ ಸದಸ್ಯರಾದ ಎಚ್‌. ವಿಶ್ವನಾಥ್‌ ಹಾಗೂ ಎಸ್‌.ವಿ. ಸಂಕನೂರ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರು ನೀಡಿದ್ದ ದೂರುಗಳ ಆಧಾರದಲ್ಲಿ ಸದನ ಸಮಿತಿ ರಚಿಸಿದ್ದು, ವಿಚಾರಣೆ ಪೂರ್ಣಗೊಳಿಸಿ, ವರದಿ ಸಲ್ಲಿಸಲು 20 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ವಿಧಾನ ಪರಿಷತ್‌ ಕಾರ್ಯದರ್ಶಿ ಕೆ.ಆರ್‌. ಮಹಾಲಕ್ಷ್ಮಿ ತಿಳಿಸಿದ್ದಾರೆ.

ಡಿ.15ರಂದು ವಿಧಾನ ಪರಿಷತ್‌ ಸಭಾಂಗಣದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ನಿಯಮಬಾಹಿರ ಮತ್ತು ಕಾನೂನುಬಾಹಿರ ವರ್ತನೆಯ ಅಂಶಗಳ ಕುರಿತು ಪರಿಶೀಲಿಸಬೇಕು. ಘಟನೆಗೆ ಕಾರಣವಾದ ಪರಿಷತ್‌ ಸಚಿವಾಲಯದ ಅಧಿಕಾರಿ, ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಸದಸ್ಯರು, ಸಚಿವರು ಮತ್ತು ಇತರರ ಬಗ್ಗೆ ಪರಿಶೀಲಿಸಬೇಕು. ಘಟನೆಯ ಕುರಿತು ಪರಿಶೀಲನೆ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಸಲ್ಲಿಸಿರುವ ದೂರುಗಳು ಹಾಗೂ ಡಿ.15ರಿಂದ ಸದನ ಸಮಿತಿ ರಚಿಸುವವರೆಗೆ ಸಭಾಪತಿ ಪೀಠ ಮತ್ತು ಸದನದ ಗೌರಕ್ಕೆ ಚ್ಯುತಿ ತರುವಂತೆ ನಡೆದಿರುವ ಎಲ್ಲ ಅಂಶಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.