ಬೆಂಗಳೂರು: ‘ದೀಪಾವಳಿ ಹಬ್ಬದ ವೇಳೆ ಬೇಕಾಬಿಟ್ಟಿಯಾಗಿ ಪಟಾಕಿ ಹೊಡೆಯುವಂತಿಲ್ಲ. ನವೆಂಬರ್ 5ರಿಂದ 8ರವರೆಗೆ ಪ್ರತಿ ನಿತ್ಯರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಇಲಾಖೆ, ಶನಿವಾರ ಸುತ್ತೋಲೆ ಹೊರಡಿಸಿದೆ.
‘ಪಟಾಕಿಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ’ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ದೀಪಾವಳಿ ಹಬ್ಬದಂದು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿತ್ತು. ಅದರನ್ವಯ ಸುತ್ತೋಲೆ ಹೊರಡಿಸಿರುವ ಇಲಾಖೆ, ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
‘ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಉಂಟು ಮಾಡುವ ಸರ (ಸರಣಿ) ಪಟಾಕಿ ತಯಾರಿಕೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ವಾರ್ತಾ ಇಲಾಖೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು, ಪಟಾಕಿ ಸಿಡಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಸಬೇಕು’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
‘ದೀಪಾವಳಿ ಆರಂಭಕ್ಕೂ ಏಳು ದಿನ ಮುನ್ನ ಹಾಗೂ ಹಬ್ಬದ ನಂತರ ಏಳು ದಿನ ಪಟಾಕಿ ಹೊಡೆಯುವುದರ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನಿಗಾ ವಹಿಸಬೇಕು.ಮಹಾನಗರ ಪಾಲಿಕೆಯು ಪಟಾಕಿ ಹೊಡೆಯಲು ಜಾಗ ಕಲ್ಪಿಸುವ ಬಗ್ಗೆ ಪರಿಶೀಲಿಸಬೇಕು. ಈ ಎಲ್ಲ ನಿಯಮಗಳು ಪಾಲನೆಯಾಗುವಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳದ ಠಾಣಾಧಿಕಾರಿಯನ್ನೇ ತಪ್ಪಿತಸ್ಥರೆಂದು ನಿರ್ಧರಿಸಿ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.