ADVERTISEMENT

ಪ್ರಜಾವಾಣಿ ದೀಪಾವಳಿ ಕಥೆ–ಕವನ ಸ್ಪರ್ಧೆ| ಕುಡ್ಲಗೆ ಕಥಾ,ಮುಲ್ತಾನಿಗೆ ಕವನ ಪ್ರಶಸ್ತಿ

ಪ್ರಜಾವಾಣಿ ದೀಪಾವಳಿ ಕಥೆ–ಕವನ ಸ್ಪರ್ಧೆ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 17:15 IST
Last Updated 1 ನವೆಂಬರ್ 2020, 17:15 IST
ಕಥೆ-ಕವನ ಸ್ಪರ್ಧೆ ವಿಜೇತರು
ಕಥೆ-ಕವನ ಸ್ಪರ್ಧೆ ವಿಜೇತರು    

ಬೆಂಗಳೂರು: 2020ನೇ ಸಾಲಿನ ಪ್ರತಿಷ್ಠಿತ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ ಮತ್ತು ‘ಪ್ರಜಾವಾಣಿ ದೀಪಾವಳಿ ಕವನಸ್ಪರ್ಧೆ’ಗಳ ಫಲಿತಾಂಶ ಪ್ರಕಟವಾಗಿದೆ. ಕೇಶವ ಕುಡ್ಲ ಅವರ ‘ಆರು ನೂರು ರೂಪಾಯಿ ಹಚ್ಚೆ’ ಕಥಾಸ್ಪರ್ಧೆಯಲ್ಲಿ ಹಾಗೂ ಮೆಹಬೂಬ್ ಮುಲ್ತಾನಿ ಅವರ ‘ಪ್ರಿಯ ಮೆಹಜಬೀನಳಿಗೆ’ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿವೆ.

ಕಥಾಸ್ಪರ್ಧೆಯಲ್ಲಿ ಇಸ್ಮಾಯಿಲ್ ತಳಕಲ್‌ ಅವರ ‘ರೋಗಗ್ರಸ್ತ’ ಹಾಗೂ ಕಂನಾಡಿಗಾ ನಾರಾಯಣ ಅವರ ‘ಗಾಂಧಿ ಕಾರಣ’ ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನಕ್ಕೆ ಆಯ್ಕೆಯಾಗಿವೆ. ಭದ್ರಪ್ಪ ಎಸ್‌. ಹೆನ್ಲಿ ಅವರ ‘ಕಂತ್ರಿನಾಯಿ’, ಲಿಂಗರಾಜ ಸೊಟ್ಟಪ್ಪನವರ ಅವರ ‘ಕೊನಡೆ’ ಮತ್ತು ಅನಂತ ಕಾಮತ್‌ ಅವರ ‘ಮಳ್ಳ ನಾರಾಯಣನೂ ವಾಲಿ ಮೋಕ್ಷ ಪ್ರಸಂಗವೂ’ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಕವನ ಸ್ಪರ್ಧೆಯಲ್ಲಿ ಡಾ.ಕೆ.ಎಸ್‌. ಗಂಗಾಧರ ಅವರ ‘ಪದಗಳಿಗೆ ಜೀವ ಬಂದೀತೇ?’ ಮತ್ತು ಶ್ರುತಿ ಬಿ.ಆರ್‌. ಅವರ ‘ಗುರುತುಗಳು ಉಳಿದಿಲ್ಲ’ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ಪಾತ್ರವಾಗಿವೆ. ಶೈಲೇಶ್‌ಕುಮಾರ್ ಶಿವಕುಮಾರ್‌ ಅವರ ‘ನಗರವಾಸಿ ನಿವೇದನೆ’, ಪೂರ್ಣಿಮಾ ಸುರೇಶ್‌ ಅವರ ‘ಒಂದು ಅಂಗುಷ್ಟ ತುಂಡಾದ ಚಪ್ಪಲಿ’ ಮತ್ತು ಮಮತಾ ಅರಸೀಕೆರೆ ಅವರ ‘ಮುಟ್ಟಬೇಕು ನೀನು’ ತೀರ್ಪುಗಾರರ ಮೆಚ್ಚುಗೆ ಗಳಿಸಿವೆ.

ADVERTISEMENT

ವಿಮರ್ಶಕ ಎಸ್‌.ಆರ್‌.ವಿಜಯಶಂಕರ, ಕಥೆಗಾರ್ತಿ ಸಂಧ್ಯಾ ಹೊನಗುಂಟಿಕರ್‌ ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕವಯಿತ್ರಿ ಜ.ನಾ.ತೇಜಶ್ರೀ ಹಾಗೂ
ವಿಮರ್ಶಕ ಸುರೇಶ ನಾಗಲಮಡಿಕೆ ಕವನಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಬಹುಮಾನ ಏನು?

ಕಥಾ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಕಥೆಗಳಿಗೆ ಕ್ರಮವಾಗಿ ಪ್ರಥಮ ₹ 20 ಸಾವಿರ, ದ್ವಿತೀಯ ₹ 15 ಸಾವಿರ ಹಾಗೂ ತೃತೀಯ ₹ 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಲಭಿಸಲಿದೆ. ಕವನ ಸ್ಪರ್ಧೆ ಮೊದಲ ಮೂರು ಸ್ಥಾನ ಪಡೆದ ಕವನಗಳಿಗೆ ಕ್ರಮವಾಗಿ ಪ್ರಥಮ ₹ 5,000, ದ್ವಿತೀಯ ₹ 3,000 ಹಾಗೂ ತೃತೀಯ ₹ 2,500 ನಗದು, ಪ್ರಶಸ್ತಿ ಪತ್ರ ದೊರೆಯಲಿದೆ.

***

ತೀರ್ಪುಗಾರರ ಟಿಪ್ಪಣಿ

ಕನ್ನಡದಲ್ಲಿ ಹೊಸದಾಗಿ ಕಥೆ ಬರೆಯುವ ಹಲವರಿದ್ದಾರೆ. ಅವರೆಲ್ಲರ ಸಮರ್ಥ ಬರಹಗಳಿಂದ ಮಾತ್ರ ಕಥಾ ಸಾಹಿತ್ಯ ಮುಂದೆ ಬೆಳೆಯಬಹುದಾಗಿದೆ. ಕಥಾಪ್ರಕಾರ ಸದ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಮೀರಿ ಬೆಳೆಯಲು ಈ ಸಲ ಪ್ರಶಸ್ತಿ ಪಡೆದ ಕಥೆಗಳು ಪ್ರಯತ್ನಿಸಿವೆ

–ಎಸ್‌.ಆರ್‌.ವಿಜಯಶಂಕರ

ಬಹುಮಾನಿತ ಮೂರೂ ಕಥೆಗಳು ವಿಭಿನ್ನ ವಿಷಯ ಹೊಂದಿದ್ದು, ಅತಿಯಾಗಿ ಕಾಡುವ ಪ್ರಸ್ತುತ ಸಮಸ್ಯೆಯ ಕುರಿತಾಗಿವೆ. ಎಲ್ಲರ ಬದುಕಿಗೆ ಅವಶ್ಯಕವಾದದ್ದು ಸ್ವಸ್ಥ ಕುಟುಂಬ, ಸಮಾಜ ಮತ್ತು ವೈಚಾರಿಕತೆ. ಅದೇ ಇಲ್ಲಿನ ಕಥೆಗಳ ಆಶಯ ಕೂಡ

–ಸಂಧ್ಯಾ ಹೊನಗುಂಟಿಕರ್‌

ಅಲ್ಲೂ ಇಲ್ಲದೆ, ಇಲ್ಲೂ ಇಲ್ಲದೆ, ಮುಟ್ಟಿದ ಎಲ್ಲೆಡೆಯೂ ಮಿಡಿಯತೊಡಗುವ ಇಡೀ ಕವಿತೆಯೇ ಅನುಭವವಾಗಿ, ರೂಪಕವಾಗಿ ನಮ್ಮೊಳಗೆ ಆಡುವುದೇ ದಿಟದ ಕವಿತೆಯ ಚೆಲುವು. ‘ಪ್ರಿಯ ಮೆಹಜಬೀನಳಿಗೆ’ ಮಾತ್ರ ಸಹಜವಾಗಿ ‘ಆದ’ ಕವಿತೆ, ಉಳಿದೆಲ್ಲವೂ ‘ಮಾಡಿದ’ ಕವಿತೆಗಳು

–ಜ.ನಾ.ತೇಜಶ್ರೀ

ಈ ಹೊತ್ತಿನ ಕವಿತೆಯ ಕೇಂದ್ರ ಕಾಳಜಿಗಳು ‘ಸಮಾಜ’ ಮತ್ತು ‘ಮನುಷ್ಯ’. ಸಾಮಾಜಿಕ ಜಾಲತಾಣಕ್ಕೆ ಸಿಕ್ಕ ಕವಿತೆಗಳು ಮಾತನ್ನು ಭರಪೂರ ಹರಿದುಬಿಡುತ್ತಿವೆ. ಸಮಾಜವನ್ನು ತಿದ್ದುವ ಸಾಧನ ಕವಿತೆಯೊಂದೇ ಎಂದು ಬಹುಬೇಗ ತೀರ್ಮಾನಕ್ಕೆ ಬಂದಂತಿದೆ

-ಸುರೇಶ ನಾಗಲಮಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.