ಉನ್ನತ ಶಿಕ್ಷಣ ಇಲಾಖೆ, ಅಜೀಂ ಪ್ರೇಮ್‍ಜಿ ಫೌಂಡೇಶನ್ ರೂಪಿಸಿದ ದೀಪಿಕಾ ವಿದ್ಯಾರ್ಥಿವೇತನ ಒಡಂಬಡಿಕೆಯನ್ನು ಸಿದ್ದರಾಮಯ್ಯ, ಉದ್ಯಮಿ ಅಜೀಂ ಪ್ರೇಮ್‌ಜಿ ಒಪ್ಪಂದ ಪತ್ರವನ್ನು ವಿನಿಯಮ ಮಾಡಿಕೊಂಡರು. ಡಾ.ಎಂ.ಸಿ. ಸುಧಾಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ರಾಜ್ಯದ ಹೆಣ್ಣು ಮಕ್ಕಳಿಗೆ ಇನ್ನು ಮುಂದೆ ಅಜೀಂ ಪ್ರೇಮ್‌ಜಿ ಫೌಂಡೇಷನ್ ಆರ್ಥಿಕ ನೆರವು ನೀಡಲಿದ್ದು, ಅದಕ್ಕಾಗಿ ₹2,000 ಕೋಟಿ ಹಾಗೂ ರಾಜ್ಯ ಸರ್ಕಾರ ₹200 ಕೋಟಿ ಒದಗಿಸಿವೆ.
ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್ ಹಾಗೂ ಉನ್ನತ ಶಿಕ್ಷಣ ಇಲಾಖೆ ‘ದೀಪಿಕಾ ವಿದ್ಯಾರ್ಥಿ ವೇತನ’ ಕಾರ್ಯಕ್ರಮ ರೂಪಿಸಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು.
ಯೋಜನೆಯಲ್ಲಿ ಪ್ರತಿ ವಿದ್ಯಾರ್ಥಿನಿಗೆ ಪದವಿ ಶಿಕ್ಷಣ ಮುಗಿಯುವವರೆಗೆ ವಾರ್ಷಿಕ ₹30,000 ಸಿಗಲಿದ್ದು, ಶೈಕ್ಷಣಿಕ ಉದ್ದೇಶ ಹಾಗೂ ಪೂರಕ ಕಾರಣಗಳಿಗೆ ಬಳಸಿಕೊಳ್ಳಬಹುದು. ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯು ಉತ್ತೀರ್ಣರಾಗಿ 2025–26ನೇ ಸಾಲಿನಲ್ಲಿ ಸಾಮಾನ್ಯ ಪದವಿ ಅಥವಾ ವೃತ್ತಿ ಶಿಕ್ಷಣ ಪದವಿಗೆ ಸೇರುವ 37,000 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನದ ನೆರವು ಸಿಗಲಿದೆ. ಅರ್ಹ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾದರೆ ಆ ಮೊತ್ತವನ್ನು ರಾಜ್ಯ ಭರಿಸಲಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಅವರು ಸುಶಿಕ್ಷಿತರಾದರೆ ಅವರ ಕುಟುಂಬ, ಸಮಾಜ, ರಾಜ್ಯವೇ ಸುಶಿಕ್ಷಿತವಾಗುತ್ತದೆ. ಈಗಾಗಲೇ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಬೋಧನೆ ಹಾಗೂ ಪ್ರಯೋಗಾಲಯ ಶುಲ್ಕಗಳನ್ನು ಮರುಪಾವತಿ ಮಾಡಲಾಗುತ್ತಿದೆ. ಸಾವಿರಾರು ವಿದ್ಯಾರ್ಥಿನಿಯರು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ. ದೀಪಿಕಾ ಕಾರ್ಯಕ್ರಮ ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ನೆರವಾಗಲಿದೆ. ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಸಮಸ್ಯೆ, ಪೋಕ್ಸೊ, ಬಾಲ ಕಾರ್ಮಿಕ ಪದ್ಧತಿಗಳ ನಿರ್ಮೂಲನೆಯ ಹೋರಾಟಕ್ಕೆ ಶಕ್ತಿ ತುಂಬಲಿದೆ’ ಎಂದರು.
ಪ್ರತಿಯೊಂದು ಮಗುವೂ ಉತ್ತಮ ಶಿಕ್ಷಣ ಪಡೆಯಬೇಕು. ಉನ್ನತ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಅದಕ್ಕಾಗಿ ನಮ್ಮ ಫೌಂಡೇಷನ್ ಶ್ರಮಿಸುತ್ತಿದೆಅಜೀಂ ಪ್ರೇಮ್ಜಿ ಉದ್ಯಮಿ
ಪ್ರತಿ ವರ್ಷ ಐವರು ಹೆಣ್ಣು ಮಕ್ಕಳಿಗೆ ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯಲು ಚಿವೆನಿಂಗ್-ಕರ್ನಾಟಕ ವಿದ್ಯಾರ್ಥಿ ವೇತನ ಸ್ಥಾಪಿಸಲಾಗಿದೆ. ದೀಪಿಕಾ ಯೋಜನೆ ಮತ್ತಷ್ಟು ಬಲ ತಂದಿದೆಡಾ.ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.