ADVERTISEMENT

ತಾಂತ್ರಿಕ ಸಮಸ್ಯೆ; ಆಸ್ತಿ ನೋಂದಣಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 16:09 IST
Last Updated 4 ಫೆಬ್ರುವರಿ 2025, 16:09 IST
ಆಸ್ತಿ ದಾಖಲೆ (ಸಾಂದರ್ಭಿಕ ಚಿತ್ರ)
ಆಸ್ತಿ ದಾಖಲೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಾವೇರಿ–2 ತಂತ್ರಾಂಶದಲ್ಲಿ ಎರಡು ದಿನಗಳಿಂದ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ತಿ ನೋಂದಣಿಗೆ ಜನರು ಪರದಾಡಿದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳ ಆಸ್ತಿ ನೋಂದಣಿಗೆ ಸರ್ಕಾರ ಇ–ಸ್ವತ್ತು, ಇ–ಖಾತಾ ಕಡ್ಡಾಯಗೊಳಿಸಿದ ನಂತರ ಹಲವು ಸಮಸ್ಯೆಗಳು ಎದುರಾಗಿದ್ದು, ನೋಂದಣಿ ಪ್ರಕ್ರಿಯೆಗೆ ತೊಡಕಾಗಿತ್ತು. ಈಗ ತಾಂತ್ರಿಕ ಸಮಸ್ಯೆಯಿಂದಾಗಿ ರಾಜ್ಯದ ಎಲ್ಲ 252 ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲೂ ನೋಂದಣಿ ಪ್ರಕ್ರಿಯೆಗೆ ತೊಡಕಾಗಿದೆ. ಪ್ರತಿ ದಿನ ಸರಾಸರಿ ಎಂಟು ಸಾವಿರ ಆಸ್ತಿಗಳ ನೋಂದಣಿ ನಡೆಯುತ್ತಿತ್ತು. ಎರಡು ದಿನಗಳಲ್ಲಿ ಈ ಸಂಖ್ಯೆ ಶೇ 50ರಷ್ಟು ಕುಸಿದಿದೆ.

ಜನರು ಸ್ವತ್ತುಗಳ ನೋಂದಣಿಗಾಗಿ ಕಚೇರಿಗಳಿಗೆ ಅಲೆದಾಡುವುದು, ವಿಳಂಬವಾಗುವುದನ್ನು ತಪ್ಪಿಸಲು, ನೋಂದಣಿ ಪ್ರಕ್ರಿಯೆಯನ್ನು ಸುಲಲಿತಗೊಳಿಸಲು ಕಾವೇರಿ ತಂತ್ರಾಂಶದ ಬದಲು ಕಾವೇರಿ–2 ತಂತ್ರಾಂಶ ಅನುಷ್ಠಾನಗೊಳಿಸಲಾಗಿತ್ತು. ಜನರೇ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ ನಂತರ ಉಪ ನೋಂದಣಾಧಿಕಾರಿಗಳು ಆನ್‌ಲೈನ್‌ನಲ್ಲೇ ಪರಿಶೀಲನೆ ನಡೆಸುತ್ತಿದ್ದಾರೆ. ಅನುಮೋದನೆ ದೊರೆತ ನಂತರ ನೋಂದಣಿ  ದಿನ, ಸಮಯ ಸಿಗುತ್ತಿದೆ. ಆ ಸಮಯಕ್ಕೆ ಕಚೇರಿಗೆ ತೆರಳಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಫೆ. 3ರ ಬೆಳಿಗ್ಗೆಯಿಂದಲೇ ತಾಂತ್ರಿಕ ಸಮಸ್ಯೆಯ ಕಾರಣ ದಾಖಲೆಗಳು ಸರಿಯಾಗಿ ಅಪ್‌ಲೋಡ್‌ ಆಗುತ್ತಿಲ್ಲ. ಕೆಲವರಿಗೆ ಸಾಧ್ಯವಾದರೂ, ಉಪ ನೋಂದಣಾಧಿಕಾರಿಗಳ ಲಾಗಿನ್‌ ಕಾರ್ಯನಿರ್ವಹಿಸುತ್ತಿಲ್ಲ. ಮುದ್ರಾಂಕ ಶುಲ್ಕ ಪಾವತಿಸಲು ಚಲನ್‌ ಸಿಗುತ್ತಿಲ್ಲ. ಹಿಂದಿನ ದಿನಗಳಲ್ಲೇ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ದಿನಾಂಕ, ಸಮಯ ಪಡೆದವರು ನೋಂದಣಿಗಾಗಿ ಇಡೀ ದಿನ ಕಾದು ವಾಪಸ್‌ ಆಗುತ್ತಿದ್ದಾರೆ. ಕಚೇರಿಗಳಲ್ಲಿ ಜನ ಸಂದಣಿ ಹೆಚ್ಚಾಗಿದೆ.

‘ಎರಡು ದಿನಗಳಿಂದ ಕಾವೇರಿ 2 ತಂತ್ರಾಂಶದ ಲಿಂಕ್‌ ಸಿಗುತ್ತಿಲ್ಲ. ಮೊದಲೇ ಎಲ್ಲ ಪ್ರಕ್ರಿಯೆ ಮುಗಿಸಿ, ದಿನಾಂಕ ನಿಗದಿ ಮಾಡಿಕೊಂಡವರಿಗೆ ರಜೆ ಹಾಕಿದ್ದು ವ್ಯರ್ಥವಾಗಿದೆ. ಋಣಭಾರ ಪ್ರಮಾಣಪತ್ರ, ದೃಢೀಕರಣ ಪ್ರಮಾಣಪತ್ರ ಸಿಗುತ್ತಿಲ್ಲ. ಬ್ಯಾಂಕ್‌ ವ್ಯವಾಹರಗಳಿಗೆ ದಾಖಲೆ ಸಲ್ಲಿಸಲು ಪರದಾಡುವಂತಾಗಿದೆ’ ಎಂದು ಆರ್‌ಆರ್‌ ನಗರದ ಶಾಂತರಾಜ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.