ADVERTISEMENT

ಜಲಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ ಭೇಟಿಗಾಗಿ ಸಿಎಂ, ಡಿಸಿಎಂ ದೆಹಲಿ ಯಾತ್ರೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 0:40 IST
Last Updated 8 ಜುಲೈ 2025, 0:40 IST
<div class="paragraphs"><p>ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್</p></div>

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್

   

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ ಭೇಟಿಗಾಗಿ ಮಂಗಳವಾರ ದೆಹಲಿಗೆ ತೆರಳಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಅವರ ಭೇಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ದೆಹಲಿಗೆ ತೆರಳಲಿರುವ ಡಿ.ಕೆ. ಶಿವಕುಮಾರ್‌ ಅವರು, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಹಾಗೂ ಹಾಸನ ಭಾಗದಲ್ಲಿ ಅರಣ್ಯ ಭೂಮಿಗೆ ಕುರಿತಂತೆ ಅನುಮತಿ ಬಗ್ಗೆ ಚರ್ಚಿಸಲು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರನ್ನೂ ಭೇಟಿ ಮಾಡಲಿದ್ದಾರೆ. ಇದೇ ವೇಳೆ ಕೇಂದ್ರ ಜಲಶಕ್ತಿ ಸಚಿವರನ್ನೂ ಭೇಟಿ ಮಾಡಲಿದ್ದಾರೆ.

ADVERTISEMENT

ಮೈಸೂರು ದಸರಾ ಉತ್ಸವದಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸುವ ಕುರಿತು ಚರ್ಚಿಸುವ ಸಲುವಾಗಿ ರಾಜನಾಥ ಸಿಂಗ್ ಅವರನ್ನು ಬುಧವಾರ ಸಂಜೆ 4.30ಕ್ಕೆ ಮುಖ್ಯಮಂತ್ರಿ ಭೇಟಿ ಮಾಡಲಿದ್ದಾರೆ.

ಪಕ್ಷದ ಕಚೇರಿಗೆ ಹೋಗಿ ಕೈ ಮುಗಿಯುತ್ತೇನೆ: ‘ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ‘ಪಕ್ಷದ ಕಚೇರಿ ನಮಗೆ ದೇವಾಲಯ ಇದ್ದಂತೆ. ದೆಹಲಿಗೆ ಭೇಟಿ ನೀಡಿದಾಗ ಅಲ್ಲಿಗೆ ಹೋಗಿ ಕೈಮುಗಿದು ಬರುತ್ತೇವೆ’ ಎಂದರು.

ದೆಹಲಿಯಲ್ಲಿ ಸಭೆ: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಅವರು ಇದೇ 10ರಂದು ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಸುರ್ಜೆವಾಲಾ ಅವರು ಒಟ್ಟು ಆರು ದಿನ ನೂರಕ್ಕೂ ಹೆಚ್ಚು ಶಾಸಕರ ದೂರು ದುಮ್ಮಾನ ಆಲಿಸಿದ ಬಳಿಕ ದೆಹಲಿಯಲ್ಲಿ ಈ ಸಭೆ ನಡೆಯುತ್ತಿದೆ. ಹೀಗಾಗಿ, ಸಭೆ ಕುತೂಹಲ ಮೂಡಿಸಿದೆ.

ಏಳೆಂಟು ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಹಾಗೂ ಸದಸ್ಯರ ಹುದ್ದೆಗಳ ನೇಮಕದ ನೆಪದಲ್ಲಿ ಮೂವರು ನಾಯಕರು ಸಭೆ ಸೇರಲಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷ ಸಂಘಟನೆ ಹಾಗೂ ಸರ್ಕಾರದ ಆಡಳಿತ ವೈಖರಿ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.