ADVERTISEMENT

ಅಲೆಮಾರಿ ನಿಗಮ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 18:45 IST
Last Updated 10 ಫೆಬ್ರುವರಿ 2021, 18:45 IST

ಬೆಂಗಳೂರು: ‘ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ‘ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿಮುಕ್ತ ಅಲೆಮಾರಿ ಅಭಿವೃದ್ಧಿ ನಿಗಮ’ ಆರಂಭಿಸಬೇಕು ಹಾಗೂ ₹150 ಕೋಟಿ ಅನುದಾನ ಮೀಸಲಿಡಬೇಕು’ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆಮಹಾಸಭಾ ಪತ್ರ ಬರೆದಿದೆ.

‘ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆವುಳ್ಳ 74 ಅಲೆಮಾರಿ ಸಮುದಾಯಗಳಿವೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬುಡ್ಗಜಂಗಮ, ಭೈರ, ಪಾಲೆ, ಹಂದಿ ಜೋಗಿಸ್, ಚೆನ್ನದಾಸರ್, ಘಂಟಿಚೋರ್‌, ಕೊರಮ, ಕೊರಚ, ದೊಂಬರ ಹಾಗೂ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಅಲೆಮಾರಿ ಬುಡಕಟ್ಟುಗಳಾದ ಹಕ್ಕಿಪಿಕ್ಕಿ, ಇರುಳಿಗ, ಕಮ್ಮಾರ, ಹಲಸರು, ರಾಜಗೊಂಡ ಸೇರಿದಂತೆ ಅನೇಕ ಸಮುದಾಯಗಳು ಅಸಂಘಟಿತರಾಗಿದ್ದು, ತುಳಿತಕ್ಕೆ ಒಳಗಾಗಿದ್ದಾರೆ’ ಎಂದು ಮಹಾಸಭಾದ ಅಧ್ಯಕ್ಷ ಬಾಲ ಗುರುಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ‘74 ಅಲೆಮಾರಿ ಜಾತಿಗಳನ್ನು ಸರ್ಕಾರ ಗುರುತಿಸಿ, ಇವರ ಅಭಿವೃದ್ಧಿಗಾಗಿ ಅಲೆಮಾರಿ ಅಭಿವೃದ್ಧಿ ಕೋಶ ಸ್ಥಾಪಿಸಿದೆ. ಆದರೆ, ಇದರಿಂದ ಸಮುದಾಯಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಒಪ್ಪೊತ್ತಿನ ಊಟಕ್ಕೂ ಅಲೆಯಬೇಕಾದ ಸ್ಥಿತಿ ಅಲೆಮಾರಿಗಳದ್ದು. ಇದಕ್ಕಾಗಿ ಈ ಬಜೆಟ್‌ನಲ್ಲಿ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.