ADVERTISEMENT

ಮುಸ್ಲಿಂ ಮೀಸಲಾತಿ ಶೇ 8ಕ್ಕೆ ಹೆಚ್ಚಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 20:45 IST
Last Updated 25 ಅಕ್ಟೋಬರ್ 2022, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಈಗಿರುವ ಶೇ 4ರಿಂದ ಶೇ 8ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಕರ್ನಾಟಕ ಮುಸ್ಲಿಂ ಯುನಿಟಿ ಸಂಘಟನೆ ಒತ್ತಾಯಿಸಿದೆ.

ಸಂಘಟನೆಯ ಸಂಚಾಲಕ ಜಬ್ಬಾರ್ಕಲ್ಬುರ್ಗಿ, ಪತ್ರಕರ್ತ ಬಿ.ಎಂ.ಹನೀಫ್ ನೇತೃತ್ವದ ನಿಯೋಗವು ಕರ್ನಾಟಕ ರಾಜ್ಯಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರನ್ನು ಭೇಟಿ ಮಾಡಿ ಈ ಕುರಿತ ಮನವಿ ಸಲ್ಲಿಸಿತು.

‘ರಾಜ್ಯ ಸರ್ಕಾರ ಹಿಂದೆ ನೇಮಿಸಿದ ಹಿಂದುಳಿದ ವರ್ಗಗಳ ಎಲ್ಲ ಆಯೋಗಗಳೂ ಮುಸ್ಲಿಮರನ್ನು ತೀವ್ರ ಹಿಂದುಳಿದ ಸಮುದಾಯ ಎಂದು ಗುರುತಿಸಿವೆ. ಕಾಂತರಾಜು ಅಧ್ಯಕ್ಷತೆಯ ಆಯೋಗ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 16ರಷ್ಟಿದೆ ಎಂದು ಗುರುತಿಸಿದೆ. ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಗೆ ಅನುಗುಣವಾಗಿ 2 ‘ಬಿ’ ಪ್ರವರ್ಗದ ಮೀಸಲಾತಿಯನ್ನು ಈಗ ನೀಡುತ್ತಿರುವ ಶೇ 4ರಿಂದ ಶೇ 8ಕ್ಕೆ ಹೆಚ್ಚಿಸಬೇಕಿದೆ. ಮುಸ್ಲಿಂ ಸಮುದಾಯದ ಸದ್ಯದ ಸ್ಥಿತಿಗತಿ ತಿಳಿದುಕೊಳ್ಳಲು ಪ್ರತ್ಯೇಕ ಸಮೀಕ್ಷೆಯನ್ನೂ ನಡೆಸಬೇಕು’ ಎಂದು ನಿಯೋಗದ ಸದಸ್ಯರು ಕೋರಿದರು.

ADVERTISEMENT

ಮನವಿ ಸ್ವೀಕರಿಸಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ‘ನಾನು ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ನಿಯೋಗ ಅಧಿಕೃತವಾಗಿ ಮನವಿ ಸಲ್ಲಿಸಿದೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಆಯೋಗದ ಸದಸ್ಯೆ ಶಾರದಾ ನಾಯಕ್, ಮುಸ್ಲಿಂ ಸಮುದಾಯದ ಮುಖಂಡರಾದ ರಿಯಾಜ್ ಮುಲ್ಲಾ, ಮೌಲಾನಾ ಮೊಹಮ್ಮದ್ ಯೂನುಸ್, ಎಂ.ಎಲ್.ಸರ್ಕಾವಸ್, ನಜೀರ್ ಹರ್ಕಾರಿ, ಅಲ್ತಾಫ್ ಕಲ್ಬುರ್ಗಿ, ಚಿಕ್ಕಮಗಳೂರಿನ ಕೆ.ಎ.ಇಮ್ದಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.