ADVERTISEMENT

11 ಐಎಎಸ್ ಅಧಿಕಾರಿಗಳಿಗೆ ಹಿಂಬಡ್ತಿ?

ಕೆಪಿಎಸ್‌ಸಿ: 1998ನೇ ಸಾಲಿನ ಪಟ್ಟಿ ಮತ್ತೆ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 19:39 IST
Last Updated 27 ಆಗಸ್ಟ್ 2019, 19:39 IST
   

ಬೆಂಗಳೂರು: ಹೈಕೋರ್ಟ್ ತೀರ್ಪಿನಂತೆ 1998ನೇ ಸಾಲಿನ 383 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತೊಮ್ಮೆ ಪರಿಷ್ಕರಿಸಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಪರಿಷ್ಕೃತ ಪಟ್ಟಿ ಜಾರಿಯಾದರೆ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದಿದ್ದ 11 ಅಧಿಕಾರಿಗಳು ಹಿಂಬಡ್ತಿ ಪಡೆಯುವುದು ಬಹುತೇಕ ಖಚಿತ. ಜತೆಗೆ 40ಕ್ಕೂ ಹೆಚ್ಚು ಅಧಿಕಾರಿಗಳು ಹುದ್ದೆ ಕಳೆದುಕೊಳ್ಳುವ ಸಾಧ್ಯತೆಗಳಿದ್ದು, 120ಕ್ಕೂ ಹೆಚ್ಚು ಅಧಿಕಾರಿಗಳ ಹುದ್ದೆ
ಗಳು ಸ್ಥಾನಪಲ್ಲಟ ಆಗಲಿದೆ ಎನ್ನಲಾಗಿದೆ. ಪರಿಷ್ಕೃತ ಪಟ್ಟಿಯನ್ನು ಕೆಪಿಎಸ್‌ಸಿ, ಮಂಗಳವಾರ ಹೈಕೋರ್ಟ್‌ಗೆ ಸಲ್ಲಿಸಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೂ ಈ ಪಟ್ಟಿ ಕಳುಹಿಸಿತ್ತು.

‘ಹೈಕೋರ್ಟ್ ನೀಡಿದ್ದ ತೀರ್ಪಿನಂತೆ ಕೊನೆಗೂ ಪಟ್ಟಿ ಪರಿಷ್ಕರಣೆಗೊಂಡಿದೆ. ಅದನ್ನು ಜಾರಿಗೊಳಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ನ್ಯಾಯದ ಪರ ನಿಲ್ಲುವ ವಿಶ್ವಾಸವಿದೆ’ ಎಂದು ಎರಡು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿರುವ ಅಭ್ಯರ್ಥಿಗಳು ಹೇಳಿದ್ದಾರೆ.

ADVERTISEMENT

1998ನೇ ಸಾಲಿನ ಆಯ್ಕೆಯಲ್ಲಿ ಅಕ್ರಮ ನಡೆದಿದ್ದು, ಅನರ್ಹರನ್ನು ಹೊರಗಿಟ್ಟು ಅರ್ಹರನ್ನು ನೇಮಕಾತಿ ಮಾಡಿಕೊಳ್ಳುವಂತೆ 2016ರ ಜೂನ್ 21ರಂದು ಹೈಕೋರ್ಟ್ ತೀರ್ಪು ನೀಡಿತ್ತು. ಅದೇ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿತ್ತು. ತೀರ್ಪಿನಲ್ಲಿದ್ದ ಮೊದಲ ಎರಡು ಅಂಶಗಳ ಆಧಾರದಲ್ಲಿ ಪಟ್ಟಿ ಪರಿಷ್ಕರಿಸಿದ್ದ ಕೆಪಿಎಸ್‌ಸಿ, ಕಳೆದ ಜನವರಿ 25ರಂದು ಅಧಿಸೂಚನೆ ಹೊರಡಿಸಿತ್ತು. ಆ ಪಟ್ಟಿ ಪ್ರಕಾರ 7 ಐಎಎಸ್ ಅಧಿಕಾರಿಗಳು ಹಿಂಬಡ್ತಿ ಮತ್ತು 28 ಅಧಿಕಾರಿಗಳು ಹುದ್ದೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದರು. 115 ಅಧಿಕಾರಿಗಳು ಸ್ಥಾನಪಲ್ಲಟಗೊಳ್ಳುವ ಪಟ್ಟಿಯಲ್ಲಿದ್ದು, ಈ ಪಟ್ಟಿಯಲ್ಲಿರುವ 40ಕ್ಕೂ ಹೆಚ್ಚು ಅಧಿಕಾರಿಗಳು ಹುದ್ದೆಯನ್ನೂ ಬದಲಿಸಿಕೊಂಡಿದ್ದಾರೆ.

ಆದರೆ, ಕೋರ್ಟ್ ತೀರ್ಪಿನಲ್ಲಿದ್ದ ಮೂರನೇ ಅಂಶ ಪರಿಗಣಿಸಿಲ್ಲ (91 ಅಭ್ಯರ್ಥಿಗಳ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಅಂಕ ಪರಿಗಣಿಸುವುದು) ಎಂದು ಕೆಲವು ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅಂಶ ಪರಿಗಣಿಸುವ ಬಗ್ಗೆ ಕೆಪಿಎಸ್‌ಸಿ, ಸ್ಪಷ್ಟೀಕರಣ ಕೇಳಿ ಅರ್ಜಿ ಸಲ್ಲಿಸಿತ್ತು. ಅದಕ್ಕೆ, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹೈಕೋರ್ಟ್, ತೀರ್ಪು ಜಾರಿಗೊಳಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದೀರಿ ಎಂದು ಕೆಪಿಎಸ್‌ಸಿಗೆ ₹1 ಲಕ್ಷ ದಂಡ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ 2ನೇ ಬಾರಿಗೆ ಇಡೀ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಿದೆ.

ಹಿಂಬಡ್ತಿ ಭೀತಿಯಲ್ಲಿರುವ ಅಧಿಕಾರಿಗಳು

ಕರೀಗೌಡ, ಶಿವಾನಂದ ಕಾಪಸಿ, ಎಚ್‌.ಬಸವರಾಜೇಂದ್ರ, ಪಿ.ವಸಂತ ಕುಮಾರ್, ಜಿ.ಸಿ.ವೃಷಬೇಂದ್ರ ಮೂರ್ತಿ, ಎಚ್.ಎನ್.ಗೋಪಾಲಕೃಷ್ಣ, ಕವಿತಾ ಎಸ್.ಮನ್ನಿಕೇರಿ, ಅಕ್ರಂ ಪಾಷಾ, ಎನ್.ಶಿವಶಂಕರ್, ಸಿ.ಎನ್.ಮೀನಾ ನಾಗರಾಜ್, ಆರ್.ಎಸ್.ಪೆದ್ದಪ್ಪಯ್ಯ.

***

ಕೊನೆಗೂ 1998ನೇ ಸಾಲಿನ ನೇಮಕಾತಿಯ ಅರ್ಹರ ಪಟ್ಟಿಯನ್ನು ಕೆಪಿಎಸ್‌ಸಿ ಪ್ರಕಟಿಸಿದೆ. ಆ ಮೂಲಕ ಗೆಲುವು ಸಿಕ್ಕಿದೆ.

-ಎಂ.ವಿ.ವೇದಾಚಲ,ನೊಂದ ಅಭ್ಯರ್ಥಿಗಳ ಪರ ಹೈಕೋರ್ಟ್ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.