ADVERTISEMENT

ಮತ್ತಿಬ್ಬರಿಗೆ ಐಎಎಸ್‌ನಿಂದ ಹಿಂಬಡ್ತಿ ಆತಂಕ

1998ರ ಗೆಜೆಟೆಡ್‌ ಪ್ರೊಬೇಷನರಿ: ಮತ್ತೊಮ್ಮೆ ಆಯ್ಕೆ ಪಟ್ಟಿ ಪರಿಷ್ಕರಿಸಿದ ಕೆಪಿಎಸ್‌ಸಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 17:13 IST
Last Updated 30 ಜನವರಿ 2021, 17:13 IST

ಬೆಂಗಳೂರು: ‘ನ್ಯಾಯಾಂಗ ನಿಂದನೆ’ಯ ಅಡಕತ್ತರಿಯಲ್ಲಿ ಸಿಲುಕಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಇದೀಗ 1998ನೇ ಸಾಲಿನ 383 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಿ ಶನಿವಾರ (ಜ. 30) ಪ್ರಕಟಿಸಿದೆ.

ಹೊಸ ಪಟ್ಟಿಯಿಂದಾಗಿ, 2019ರ ಆಗಸ್ಟ್ 22ರಂದು ಪ್ರಕಟಿಸಿದ್ದ ಪರಿಷ್ಕೃತ ಪಟ್ಟಿ ಪ್ರಕಾರ ಐಎಎಸ್‌ ಕಳೆದುಕೊಳ್ಳಲಿದ್ದ ನಾಲ್ವರ ಪೈಕಿ ಅಕ್ರಮ ಪಾಷಾ ಮತ್ತು ಮೀನಾ ನಾಗರಾಜ್‌ ನಿರಾಳರಾಗಿ ದ್ದಾರೆ. ಶಿವಶಂಕರ್‌ ಮತ್ತು ಪೆದ್ದಪ್ಪಯ್ಯ ಐಎಎಸ್‌ ಕಳೆದುಕೊಳ್ಳುವ ಪಟ್ಟಿ ಸೇರಿದ್ದಾರೆ.

2018ರ ಫೆ. 28ರಂದು ಪರಿಷ್ಕರಿಸಿದ್ದ ಪಟ್ಟಿಯಂತೆ ಏಳು ಅಧಿಕಾರಿ ಗಳು ಐಎಎಸ್‌ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದು, ಈ ಅಧಿಕಾರಿಗಳಲ್ಲಿ ಒಬ್ಬರು ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಹೊಸ ಪಟ್ಟಿಯಿಂದ, ನಿವೃತ್ತರೂ ಸೇರಿ ಒಟ್ಟು ಒಂಬತ್ತು ಅಧಿಕಾರಿ ಗಳು ಐಎಎಸ್‌ನಿಂದ ಹಿಂಬಡ್ತಿ ಪಡೆಯುವ ಆತಂಕ ಎದುರಿಸುವಂತಾಗಿದೆ.

ADVERTISEMENT

ಕೆಪಿಎಸ್‌ಸಿ ಎಡವಟ್ಟು

1998ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ, 2016ರ ಜೂನ್‌ 21ರಂದು ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿದ್ದ ಮೂರನೇ ಅಂಶವನ್ನು ಪಾಲಿಸುವ ವೇಳೆ ಕೆಪಿಎಸ್‌ಸಿ ಎಡವಟ್ಟು ಮಾಡಿತ್ತು. 91 ಸ್ಕ್ರಿ‍ಪ್ಟ್‌ಗಳ (ಉತ್ತರ ಪತ್ರಿಕೆ) ಮೂರನೇ ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿ ಆಯ್ಕೆ ಪಟ್ಟಿ ಪರಿಷ್ಕರಿಸು ವಂತೆ ತೀರ್ಪಿನಲ್ಲಿತ್ತು. ಆದರೆ, ಕೆಪಿಎಸ್‌ಸಿ 91 ಅಭ್ಯರ್ಥಿಗಳ (119 ಉತ್ತರ ಪತ್ರಿಕೆ) ಮೂರನೇ ಮೌಲ್ಯಮಾಪನ ಅಂಕಗಳನ್ನು ಪರಿಗಣಿಸಿ, ಪಟ್ಟಿಯನ್ನು 2019ರ ಆಗಸ್ಟ್ 22ರಂದು ಪರಿಷ್ಕರಿಸಿತ್ತು. ಈ ಹೊಸ ಪಟ್ಟಿಯಿಂದ 2018ರ ಫೆ. 28ರಂದು ಪ್ರಕಟಿಸಿದ್ದ ಆಯ್ಕೆ ಪಟ್ಟಿ ಬದಲಾಗಿ, 15 ಅಧಿಕಾರಿ ಗಳ ಹುದ್ದೆಗಳು ಸ್ಥಾನಪಲ್ಲಟ ಗೊಂಡಿದ್ದವು.

91 ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಪರಿಗಣಿಸಿದ ಕೆಪಿಎಸ್‌ಸಿ ನಡೆಯನ್ನು ಪ್ರಶ್ನಿಸಿ ಚನ್ನಪ್ಪ (ಐಎಎಸ್ ಬಡ್ತಿ ನಿರೀಕ್ಷೆಯಲ್ಲಿರುವವರು) ಮತ್ತು ಅಕ್ರಂ ಪಾಷಾ ಹೈಕೋಟ್‌ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ದೂರಿನ ವಿಚಾರಣೆ ವೇಳೆ (ಡಿ. 4ರಂದು) ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದ ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ, ‘ಉದ್ದೇಶಪೂರ್ವಕವಲ್ಲದ ತಪ್ಪಿಗೆ ಕೆಪಿಎಸ್‌ಸಿ ವಿಷಾದ ವ್ಯಕ್ತಪಡಿಸುತ್ತದೆ. ಎರಡು ತಿಂಗಳ ಒಳಗೆ ಆಯ್ಕೆ ಪಟ್ಟಿ ಪರಿಷ್ಕರಿಸಲಾಗುವುದು’ ಎಂದಿದ್ದರು. ಅದರಂತೆ ಪರಿಷ್ಕೃತ ಪಟ್ಟಿ ಪ್ರಕಟವಾಗಿದೆ.

1998ನೇ ಸಾಲಿನ ಹೊಸ ಆಯ್ಕೆ ಪಟ್ಟಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದರೆ, ಆಗ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದ ಗೋಪಾಲಕೃಷ್ಣ, ಕರೀಗೌಡ, ಕವಿತಾ ಮನ್ನಿಕೇರಿ, ವೃಷಭೇಂದ್ರ ಮೂರ್ತಿ (ನಿವೃತ್ತರಾಗಿದ್ದಾರೆ), ವಸಂತಕುಮಾರ್‌, ಶಿವಾನಂದ ಕಾಪಸಿ, ಬಸವರಾಜೇಂದ್ರ, ಶಿವಶಂಕರ್‌, ಪೆದ್ದಪ್ಪಯ್ಯ ಆ ಹುದ್ದೆಯಿಂದ ಬೇರೆ ಹುದ್ದೆಗೆ ಸ್ಥಾನಪಲ್ಲಟಗೊಳ್ಳಲಿದ್ದಾರೆ. ಹೀಗಾಗಿ ಐಎಎಸ್‌ನಿಂದಲೂ ಹಿಂಬಡ್ತಿ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.