ADVERTISEMENT

ಡೆಂಗಿ: ಮೂರು ತಿಂಗಳು ಮುನ್ನೆಚ್ಚರಿಕೆ ಅಗತ್ಯ- ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 1:13 IST
Last Updated 7 ಆಗಸ್ಟ್ 2024, 1:13 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ‘ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಇಳಿಕೆ ಕಂಡರೂ ಅಕ್ಟೋಬರ್ ಅಂತ್ಯದವರೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಕರಣಗಳು ಕಡಿಮೆಯಾದ ಬಳಿಕ ಡೆಂಗಿ ಜ್ವರ ನಿಯಂತ್ರಣಕ್ಕೆ ಬಂದಿತು ಎನ್ನಲು ಸಾಧ್ಯವಿಲ್ಲ. ಬಿಸಿಲು–ಮಳೆಯ ವಾತಾವರಣದಿಂದ ಪ್ರಕರಣಗಳ ಏರಿಳಿತವಾಗುತ್ತದೆ’ ಎಂದರು. 

ರಾಜ್ಯದಲ್ಲಿ 259 ಮಂದಿ ಹೊಸದಾಗಿ ಡೆಂಗಿ ಪೀಡಿತರಾಗಿರುವುದು ಮಂಗಳವಾರ ದೃಢಪಟ್ಟಿದ್ದು, ಈ ಜ್ವರ ಪೀಡಿತರಲ್ಲಿ 395 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಸಕ್ರಿಯ ಡೆಂಗಿ ಪ್ರಕರಣಗಳ ಸಂಖ್ಯೆ 2,085ಕ್ಕೆ ಇಳಿಕೆಯಾಗಿದೆ. ಡೆಂಗಿ ಪೀಡಿತರಲ್ಲಿ ಸದ್ಯ 1,827 ಮಂದಿ ಮನೆ ಆರೈಕೆಗೆ ಒಳಗಾದರೆ, ತೀವ್ರ ನಿಗಾ ಘಟಕದಲ್ಲಿರುವ ಆರು ಮಂದಿ ಸೇರಿ 258 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ADVERTISEMENT

24 ಗಂಟೆಗಳ ಅವಧಿಯಲ್ಲಿ 1,989 ಪರೀಕ್ಷೆಗಳನ್ನು ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 126 ಸೇರಿ 27 ಜಿಲ್ಲೆಗಳಲ್ಲಿ ಹೊಸದಾಗಿ ಡೆಂಗಿ ಪ್ರಕರಣಗಳು ಖಚಿತಪಟ್ಟಿವೆ. ಬೆಳಗಾವಿ (23) ಹಾಗೂ ತುಮಕೂರಿನಲ್ಲಿ (13) ಅಧಿಕ ಪ್ರಕರಣಗಳು ವರದಿಯಾಗಿವೆ. 

ರಾಜ್ಯದಲ್ಲಿ ಡೆಂಗಿ ಪತ್ತೆಗೆ ಸಂಬಂಧಿಸಿದಂತೆ ಈವರೆಗೆ 1.38 ಲಕ್ಷ ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 19,923ಕ್ಕೆ ಏರಿಕೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.