ಬೆಂಗಳೂರು: ‘ನನಗೆ ಅಮೆರಿಕಕ್ಕೆ ತೆರಳಲು ಅನುಮತಿ ನೀಡದಿರಲು ಕಾರಣವೇನೆಂದು ವಿವರಣೆ ಪಡೆಯಲು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (ಎಂಇಎ) ಪತ್ರ ಬರೆಯುತ್ತೇನೆ’ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಅಮೆರಿಕಕ್ಕೆ ನಿಯೋಗ ಹೋಗುವುದಾಗಿ ಮೇ 15ರಂದು ಎಇಎಗೆ ಮಾಹಿತಿ ನೀಡಲಾಗಿತ್ತು. ಯಾವುದೇ ಕಾರಣ ಕೊಡದೆ ಜೂನ್ 4ಕ್ಕೆ ಅರ್ಜಿಯನ್ನು ತಿರಸ್ಕರಿಸಲಾಗಿತ್ತು’ ಎಂದರು.
‘ಜೂನ್ 6ರಂದು ನನ್ನ ಹೆಸರು ತೆಗೆದು ನಿಯೋಗದಲ್ಲಿದ್ದ ಅಧಿಕಾರಿಗಳ ಹೆಸರನ್ನು ಮಾತ್ರ ಎಇಎಗೆ ಕಳುಹಿಸಿದೆ. ಅದಕ್ಕೆ 11ರಂದು ಅನುಮತಿ ನೀಡಿದ್ದಾರೆ. 12ರಂದು ಶರತ್ ಬಚ್ಚೇಗೌಡ ಹೆಸರನ್ನು ಕಳುಹಿಸಿದೆ. 14ಕ್ಕೆ ಅವರಿಗೂ ಅನುಮತಿ ನೀಡಲಾಗಿದೆ. ಆದರೆ, ನನಗೆ ಮಾತ್ರ ಅನುಮತಿ ನಿರಾಕರಿಸಲಾಗಿದೆ. ಈ ಬಗ್ಗೆ ಎಇಎಯಿಂದ ಸ್ಪಷ್ಟೀಕರಣ ಕೋರುತ್ತೇನೆ. ಪ್ರಧಾನಿಗೆ ಪತ್ರ ಬರೆದು ಸ್ಪಷ್ಟೀಕರಣ ಪಡೆಯುವಂತೆ ಮುಖ್ಯಮಂತ್ರಿಯವರಿಗೂ ಮನವಿ ಮಾಡುತ್ತೇನೆ’ ಎಂದರು.
‘ಅನುಮತಿ ನಿರಾಕರಣೆ ವಿಚಾರದಲ್ಲಿ ರಾಜಕೀಯ ಬೇಡವೆಂದು ಸುಮ್ಮನಿದ್ದೆ. ಪ್ರಧಾನಿಯವರು ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂದು ಸಾಲು ಸಾಲು ಘೋಷಣೆ ಮಾಡಿದ್ದಾರೆ. ಮೋದಿಯವರು ಕನಸು ಕಾಣುವುದಷ್ಟೆ. ನನಸು ಮಾಡುತ್ತಿರುವವರು ನಾವು’ ಎಂದು ವಿವಿಧ ಕ್ಷೇತ್ರಗಳಲ್ಲಿನ ಕರ್ನಾಟಕದ ಸಾಧನೆಯನ್ನು ವಿವರಿಸಿದರು.
‘ನಮ್ಮ ವಿದೇಶಾಂಗ ನೀತಿಯನ್ನು ಅಮೆರಿಕಕ್ಕೆ ಅಡ ಇಟ್ಟಿದ್ದಾರೆ. ಈಗ ನಮ್ಮ ಬಂಡವಾಳ ನೀತಿಯನ್ನೂ ಅಡ ಇಟ್ಟಿದ್ದೇವೆ. ಪ್ರಿಯಾಂಕ್ ಅಂದರೆ ಅವರಿಗೆ ನೋವು. ಪ್ರಿಯಾಂಕ್ ಖರ್ಗೆ ಅಂದರೆ ಇನ್ನೂ ನೋವು’ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ ಅವರು, ‘ಪ್ರತಿಯೊಂದನ್ನು ಪ್ರಶ್ನೆ ಮಾಡುತ್ತಿರುವ ಕಾರಣಕ್ಕೆ ವೈಯಕ್ತಿಕವಾಗಿಯೂ ನನ್ನನ್ನು ಗುರಿ ಮಾಡುತ್ತಿರಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.