ಬೆಂಗಳೂರು: ಗ್ರೇಡ್–1 ಮತ್ತು ಗ್ರೇಡ್–2 ತಹಶೀಲ್ದಾರ್ ಹುದ್ದೆಗಳಿಗೆ ಬೇರೆ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸುವುದನ್ನು ನಿರ್ಬಂಧಿಸಿ ರಾಜ್ಯ ನಾಗರಿಕ ಸೇವಾ ನಿಯಮಗಳು ಮತ್ತು ರಾಜ್ಯ ಸಿವಿಲ್ ಸೇವಾ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಜಾರಿಗೊಳಿಸಿ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ.
ಕಂದಾಯ ಇಲಾಖೆಯ ಗ್ರೇಡ್– 1 ಮತ್ತು ಗ್ರೇಡ್–2 ತಹಶೀಲ್ದಾರ್ ಹುದ್ದೆಗಳಿಗೆ ಅನ್ಯ ಇಲಾಖೆಗಳ ಅಧಿಕಾರಿಗಳನ್ನು ಎರವಲು ಸೇವೆಯ ಆಧಾರದಲ್ಲಿ ನಿಯೋಜನೆ ಮಾಡಲಾಗುತ್ತಿತ್ತು. ಕಂದಾಯ ಇಲಾಖೆಯ ಅಧಿಕಾರಿಗಳನ್ನು ಮಾತ್ರವೇ ತಹಶೀಲ್ದಾರ್ ಹುದ್ದೆಗಳಿಗೆ ನಿಯೋಜಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು.
ಗ್ರೇಡ್–1 ಮತ್ತು ಗ್ರೇಡ್–2 ತಹಶೀಲ್ದಾರ್ ಹುದ್ದೆಗಳಿಗೆ ಇತರ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸುವುದನ್ನು ನಿರ್ಬಂಧಿಸಿ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿತ್ತು. ಮೇ 13ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಈ ಸಂಬಂಧ ಸಲ್ಲಿಕೆಯಾಗಿದ್ದ ಆಕ್ಷೇಪಣೆ, ಸಲಹೆಗಳನ್ನು ಇತ್ಯರ್ಥಪಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಶುಕ್ರವಾರ ಅಂತಿಮ ಅಧಿಸೂಚನೆ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.