ADVERTISEMENT

ಮೊದಲ ಡೋಸ್‌ ನಂತರ ಕಾಲೇಜು ಆರಂಭ ನಿರ್ಧಾರ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 11:48 IST
Last Updated 24 ಜೂನ್ 2021, 11:48 IST
   

ಬೆಂಗಳೂರು: ‘ಹದಿನೆಂಟು ವರ್ಷ ದಾಟಿದ ಕಾಲೇಜು ವಿದ್ಯಾರ್ಥಿಗಳು, ಬೋಧಕ ಹಾಗೂ ಸಹಾಯಕ ಸಿಬ್ಬಂದಿಗೆ ಆದ್ಯತೆ ಮೇಲೆ ಕೋವಿಡ್‌ ಲಸಿಕೆ ನೀಡಲಾಗುವುದು. ಮೊದಲ ಡೋಸ್‌ ಲಸಿಕೆ ಹಾಕಿದ ನಂತರ ಕಾಲೇಜುಗಳಲ್ಲಿ ನೇರ ತರಗತಿಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು’ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಟ್ವೀಟ್‌ ಮಾಡಿರುವ ಅವರು, ‘ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದೊಂದಿಗೆ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಆಭಿಯಾನಕ್ಕೆ ಕ್ರಮ ತೆಗೆದುಕೊಳ್ಳುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ’ ಎಂದಿದ್ದಾರೆ.

‘ಮುಖ್ಯಮಂತ್ರಿ ಆಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಲಸಿಕೆ ಹಾಕಿದ ನಂತರ ಪದವಿ ತರಗತಿಗಳನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಯಿತು. ಆಯಾ ಕಾಲೇಜುಗಳಲ್ಲಿಯೇ ಲಸಿಕೆ ಅಭಿಯಾನ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ADVERTISEMENT

‘ಲಸಿಕೆ ಪಡೆಯಲು ಆಯಾ ಸಂಸ್ಥೆಗಳಲ್ಲಿ ನೀಡಲಾಗುವ ದೃಢೀಕರಣ ಪತ್ರ ಹಾಜರುಪಡಿಸಬೇಕು. ಪ್ರತಿ ಕಾಲೇಜಿನ ಮುಖ್ಯಸ್ಥರು ಹಾಗೂ ಇನ್ನೊಬ್ಬ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯಾಗಿ ನಿಯೋಜಿಸಲಾಗುವುದು. ಈ ಲಸಿಕೀಕರಣಕ್ಕೆ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಇರುತ್ತದೆ. ಅದರಂತೆಯೇ ಲಸಿಕೀಕರಣ ನಡೆಸಲಾಗುವುದು. ಅಲ್ಲದೆ, ನೋಡಲ್‌ ಅಧಿಕಾರಿಗಳು ಆಯಾ ಶಿಕ್ಷಣ ಸಂಸ್ಥೆಯಲ್ಲಿನ ಎಲ್ಲ ಅರ್ಹರಿಗೂ ತಪ್ಪದೇ ಲಸಿಕೆ ಕೊಡಿಸಬೇಕು ಎಂದು ಸೂಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಲಸಿಕೆ ಕೊಡಲಿ ಬಿಡಲಿ ಕಲಿಕೆ ನಿಲ್ಲುವುದಿಲ್ಲ. ಲಸಿಕೆ ಪಡೆದ ಮೇಲೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬಹುದು ಅಥವಾ ತಾವಿದ್ದಲ್ಲಿಯೇ ಆನ್‌ಲೈನ್‌ ಕ್ಲಾಸ್‌ ಹಾಜರಾಗಬಹುದು. ಹಾಜರಾತಿ ಮಾತ್ರ ಕಡ್ಡಾಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.