ಅಂಗವಿಕಲರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಿದರು.
ಬೆಂಗಳೂರು: ‘ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಗಳ ವೆಚ್ಚದಲ್ಲಿ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಕಡಿತಗೊಳಿಸಿದ್ದ ₹44 ಕೋಟಿ ಅನುದಾನವನ್ನು ಪೂರಕ ಅಂದಾಜಿನಲ್ಲಿ ಮರು ಮಂಜೂರು ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವ ಅಂಗವಿಕಲರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಸುಮಾರು 15 ಲಕ್ಷ ಅಂಗವಿಕಲರಿದ್ದಾರೆ. ಇವರೆಲ್ಲರ ಆರೈಕೆ ಮಾಡಿ ವಿಶೇಷ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯ. ಸಂವಿಧಾನವು ಎಲ್ಲರಿಗೂ ಬದುಕುವ, ಉದ್ಯೋಗ ಪಡೆಯುವ ಅವಕಾಶ ಕಲ್ಪಿಸಿದೆ. ಇವರು ಸಮಾಜಕ್ಕೆ ಹೊರೆಯಲ್ಲ, ಆಸ್ತಿಯಾಗಿದ್ದಾರೆ. ಇವರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದು, ಇತ್ತೀಚೆಗೆ ನಡೆದ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ದೇಶದ ಕ್ರೀಡಾಪಟುಗಳು ಹೆಚ್ಚಿನ ಪದಕಗಳನ್ನು ಪಡೆದಿದ್ದಾರೆ’ ಎಂದು ಹೇಳಿದರು.
‘ಸಾಮಾಜಿಕ ಸಬಲೀಕರಣಕ್ಕಾಗಿ ಶೇ 40ರಿಂದ 74ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಪ್ರತಿ ತಿಂಗಳು ₹800 ಹಾಗೂ ಶೇ 75ಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವವರಿಗೆ ₹1,400, ಮನೋವೈಕಲ್ಯ ಇರುವ ವ್ಯಕ್ತಿಗಳಿಗೆ ₹2,000 ಮಾಸಾಶನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ನೀಡಲಾಗುವ ಅಂಗವಿಕಲರ ಮಾಸಾಶನ ಮೊತ್ತವನ್ನು ಹೆಚ್ಚಿಸುವಂತೆ ಪತ್ರ ಬರೆಯಲಾಗುವುದು’ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಉಪಸ್ಥಿತರಿದ್ದರು.
ಆರೈಕೆ ಭತ್ಯೆಗೆ ಚಾಲನೆ: ಅಂಗವಿಕಲರ ಆರೈಕೆದಾರರಿಗೆ ಪ್ರತಿ ತಿಂಗಳು ₹1 ಸಾವಿರ ಭತ್ಯೆ ನೀಡುವ ಯೋಜನೆ ಅನುಷ್ಠಾನಕ್ಕೆ ಸಮಾರಂಭದಲ್ಲಿ ಚಾಲನೆ ನೀಡಲಾಯಿತು. ಮುಖ್ಯಮಂತ್ರಿಯವರು ಐವರಿಗೆ ಸಾಂಕೇತಿಕವಾಗಿ ಮಂಜೂರಾತಿ ಪತ್ರ ವಿತರಿಸಿದರು.
14 ವ್ಯಕ್ತಿಗಳಿಗೆ 10 ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕೊಪ್ಪ ಗ್ರಾಮದ ಹನುಮಂತ ಹಾವಣ್ಣನವರ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸಬೀಯಾ ಬೇಗಂ ದಾವಲಸಾಬ ಮರ್ತ್ತೂರ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಮಹಾಂತೇಶ್ ಬ್ರಹ್ಮ ರಾಯಚೂರಿನ ಹೊನ್ನಪ್ಪ ಮೈಸೂರಿನ ಎನ್. ಶ್ರೀಧರ್ ದೀಕ್ಷಿತ್ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕೊಳೂರು ಎಲ್.ಟಿ. ಗ್ರಾಮದ ಮಹೇಶ ರಾಮನಾಥ ತೋಟದ ಉಡುಪಿ ಜಿಲ್ಲೆಯ ಹೆಗ್ಗುಂಜೆ ಗ್ರಾಮದ ಉಮೇಶ್ ಕುಂದರ್ ಬೆಂಗಳೂರಿನ ಅನಿಲ್ ಡಿ. ಅಲ್ಮೆಡಾ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಿರೇಜಾವೂರು ಗ್ರಾಮದ ನಾಗರಾಜ ನಾಡಗೌಡರ ಬೆಂಗಳೂರಿನ ಮೇಘನಾ ಜೋಯಿಸ್ ಮೈಸೂರಿನ ಮಧುಸೂದನ್ ಡಿ. ಬೆಂಗಳೂರಿನ ಮಂಜುಳಾ ವಿ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಗುಂಡ್ಲೂರ ಚಾಳ ಗ್ರಾಮದ ಫಕ್ಕೀರಗೌಡ ಚನ್ನಬಸಪ್ಪ ಪಾಟೀಲ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ವಿಜಯ್ ಕುಮಾರ್ ಎಚ್. ಬಣಕಾರ ಅವರು ಅಂಗವಿಕಲರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಅಕಾಡೆಮಿ ಫಾರ್ ಸಿವಿಯರ್ ಹ್ಯಾಂಡಿಕ್ಯಾಪ್ಸ್ ಆ್ಯಂಡ್ ಆಟಿಸಂ ಬಾಗಲಕೋಟೆ ಜಿಲ್ಲೆಯ ಹುನಗುಂದದ ಬಿಜಾಪುರ ಇಂಟಿಗ್ರೇಟೆಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿಗಳಿಗೆ ಅಂಗವಿಕಲರ ಕ್ಷೇತ್ರದಲ್ಲಿ ಸಾಧನೆಗೈದಿರುವುದಕ್ಕಾಗಿ ಅತ್ಯುತ್ತಮ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನ ಈಶಾನ್ಯ ಇಂಡಿಯಾ ಫೌಂಡೇಶನ್ ಮಲ್ಟಿಪಲ್ ಸ್ಕ್ಲೈರೋಸಿಸ್ ಸೊಸೈಟಿ ಆಫ್ ಇಂಡಿಯಾ ಸಜ್ಜನ್‌ರಾವ್ ವಿದ್ಯಾಸಂಸ್ಥೆ ಕೊಪ್ಪಳ ಜಿಲ್ಲೆ ಇನ್ನರ್ ವ್ಹೀಲ್ ಕ್ಲಬ್ ಕೊಪ್ಪಳ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ದೇವಲಪೂರದ ದಿ ಅಪಾಸ್ತೋಲಿಕ್ ಕಾರ್ಮೆಲ್ ವಿದ್ಯಾ ವಿಕಾಸ ಕೇಂದ್ರ–ಕಾರ್ಮೆಲ್ ವಿದ್ಯಾ ವಿಕಾಸ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ವಿಜಯನಗರ ಜಿಲ್ಲೆಯ ಸಾಧ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್‌ಮೆಂಟ್ ಮೈಸೂರಿನ ಕರುಣಾಮಯಿ ಫೌಂಡೇಶನ್–ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಚೆಟ್ಟಿ ಕುಡಿಗೆಯ ಸಂತ ಬೆನೆಡಿಕ್ಟ್ ಹೋಂ ಸಂಸ್ಥೆಗಳಿಗೆ ಉತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಿ.ಎಂ. ಗಲ್ಲ ಮುಟ್ಟಿ ಸಂಭ್ರಮಿಸಿದ ಮಗು
ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಮಕ್ಕಳಿಂದ ಜೋತಿ ಬೆಳೆಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬಾಲಕಿಯೊಬ್ಬಳು ಸಿದ್ದರಾಮಯ್ಯ ಅವರ ಗಲ್ಲವನ್ನು ಮುಟ್ಟಿ ಸಂಭ್ರಮಿಸಿದಳು. ಮುಖ್ಯಮಂತ್ರಿಯವರೂ ಮಗುವನ್ನು ಮುದ್ದು ಮಾಡಿದರು. ಈ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.