ADVERTISEMENT

ಕಾಸರಗೋಡು:ನಾಗರಿಕ ಸಮಿತಿ ಸದಸ್ಯರಿಂದ ‘ದೇವಾಲಯ ಪ್ರವೇಶ’

ಕಾಸರಗೋಡು: ಪಿಲಿಕ್ಕೋಡ್‌ ರಯರಮಂಗಲ ಭಗವತಿ ದೇವಸ್ಥಾನದ ಒಳಾಂಗಣದಿಂದ ದರ್ಶನ ವಿವಾದ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 15:56 IST
Last Updated 13 ಏಪ್ರಿಲ್ 2025, 15:56 IST
ಪಿಲಿಕೋಡ್ ಭಗವತಿ ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದೇವಿ ದರ್ಶನ ಪಡೆದ ನಾಗರಿಕರ ಸಮಿತಿ ಪ್ರತಿನಿಧಿಗಳು
ಪಿಲಿಕೋಡ್ ಭಗವತಿ ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದೇವಿ ದರ್ಶನ ಪಡೆದ ನಾಗರಿಕರ ಸಮಿತಿ ಪ್ರತಿನಿಧಿಗಳು   

ಮಂಗಳೂರು: ದೇವಸ್ಥಾನದ ಒಳ ಆವರಣದಲ್ಲಿ ನಿಂತು ದರ್ಶನ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶ ನೀಡಬೇಕು ಎಂಬ ಬೇಡಿಕೆ ಇರಿಸಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಪಿಲಿಕೋಡ್‌ ಶ್ರೀ ರಯರಮಂಗಲ ಭಗವತಿ ದೇವಸ್ಥಾನದ ನಾಗರಿಕರ ಸಮಿತಿಯವರು ಭಾನುವಾರ ‘ದೇವಸ್ಥಾನ ಪ್ರವೇಶ’ ಮಾಡಿದರು.

ಕಣ್ಣೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ, ದೇವಸ್ವಂ ಬೋರ್ಡ್‌ (ಮುಜರಾಯಿ) ಅಧೀನದ ಈ ದೇವಸ್ಥಾನದಲ್ಲಿ ನಿತ್ಯ ಪೂಜೆ ಮತ್ತು ವಿಶೇಷ ಸಂದರ್ಭಗಳಲ್ಲಿ ದೇವರ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವ ವಿವಿಧ ಸಮುದಾಯದ ಜನರಿಗೆ ಮಾತ್ರ ಒಳಾಂಗಣಕ್ಕೆ ಪ್ರವೇಶವಿದೆ. ಈ ಅವಕಾಶವನ್ನು ಎಲ್ಲರಿಗೂ ಒದಗಿಸಬೇಕು ಎಂದು ನಾಗರಿಕರ ಸಮಿತಿ ಒತ್ತಾಯಿಸಿತ್ತು. ದೇವಸ್ಥಾನದಲ್ಲಿ ಪುನರ್‌ ಪ್ರತಿಷ್ಠಾ ಕಾರ್ಯಗಳು ಈಚೆಗೆ ನಡೆದಿದ್ದವು. ಆಗ ಈ ವಿಷಯ ಚರ್ಚೆಗೆ ಬಂದಿತ್ತು. ಪುನರ್‌ ಪ್ರತಿಷ್ಠಾ ಕಾರ್ಯದ ನಂತರವೂ ಹಿಂದಿನ ಸಂಪ್ರದಾಯ ಮುಂದುವರಿಸಿದ್ದನ್ನು ವಿರೋಧಿಸಿ ಭಾನುವಾರ ಬೆಳಿಗ್ಗೆ 16 ಮಂದಿ ಮತ್ತು ಮಧ್ಯಾಹ್ನ ಇನ್ನಷ್ಟು ಜನರು ಒಳಗೆ ಹೋದರು.

‘ಮೂರು ದಶಕದ ಹಿಂದೆ ದೇವಸ್ಥಾನದ ಹೊರ ಆವರಣದಲ್ಲಿ ನಿಂತು ದರ್ಶನ ಪಡೆಯಲಾಗುತ್ತಿತ್ತು. ನಂತರ ಒಳ ಆವರಣಕ್ಕೆ ಪ್ರವೇಶ ಕಲ್ಪಿಸಲಾಯಿತು. ಸಾಮಾನ್ಯವಾಗಿ ಎಲ್ಲ ದೇವಸ್ಥಾನಗಳಲ್ಲಿ ಗರ್ಭಗುಡಿ ಮತ್ತು ಒಳ ಆವರಣದ ಮಧ್ಯದಲ್ಲಿ ನಿಂತು ದರ್ಶನ ಪಡೆಯಲಾಗುತ್ತದೆ. ಇಲ್ಲಿ ಮಾತ್ರ ವ್ಯತಿರಿಕ್ತ. ಈ ಪದ್ಧತಿಯನ್ನು ಬದಲಿಸಬೇಕು ಎಂಬ ಒತ್ತಾಯ ಪುನರ್‌ ಪ್ರತಿಷ್ಠಾ ಉತ್ಸವದ ಸಂದರ್ಭದಲ್ಲಿ ಕೇಳಿಬಂದಿತ್ತು. ಸಭೆಯಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. ಅದು ಜಾರಿಯಾಗದ ಕಾರಣ ರಾಜಕೀಯ ಪಕ್ಷಗಳು ಮತ್ತು ಯುವಸಮುದಾಯದ ಪ್ರತಿನಿಧಿಗಳನ್ನು ಸೇರಿಸಿ ಸಮಿತಿ ರಚಿಸಲಾಗಿತ್ತು. ದೇವಸ್ಥಾನದ ಪ್ರಮುಖ ಉತ್ಸವಗಳಲ್ಲಿ ಒಂದಾದ ಪೂರಂ ಏಪ್ರಿಲ್‌ 10ರಂದು ಮುಕ್ತಾಯಗೊಂಡಿದೆ. ಉತ್ಸವದ ಸಂದರ್ಭದಲ್ಲಿ ಸಂಘರ್ಷ ಬೇಡ ಎಂದುಕೊಂಡು ಸುಮ್ಮನಾಗಿದ್ದೆವು’ ಎಂದು ನಾಗರಿಕ ಸಮಿತಿಯ ಅಧ್ಯಕ್ಷ ಉಮೇಶ್ ಪಿಲಿಕೋಡ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪುನರ್‌ ಪ್ರತಿಷ್ಠಾ ಉತ್ಸವದ ಸಂದರ್ಭದಲ್ಲಿ ಊರ ಜನರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಲಾಗಿದೆ. ಆದರೂ ಒಳಾಂಗಣದಲ್ಲಿ ನಿಂತು ದರ್ಶನ ಪಡೆಯುವ ಭಾಗ್ಯ ಒದಗಲಿಲ್ಲ. ನಂಬೂದಿರಿ, ನಾಯರ್‌, ಮಾರಾರ್‌, ವಾರಿಯರ್ ಮತ್ತು ದೇವಸ್ಥಾನದ ಪೂಜಾದಿ ಕಾರ್ಯಗಳಲ್ಲಿ ಪಾಲ್ಗೊಳ್ಳುವವರಿಗೆ ಮಾತ್ರ ಒಳಾಂಗಣಕ್ಕೆ ಪ್ರವೇಶ ಇರುವುದು. ಉಳಿದವರು ಹೊರಗೆ ನಿಂತು ಪ್ರಸಾದ ಸ್ವೀಕರಿಸಿ ವಾಪಸ್‌ ಹೋಗಬೇಕು. ಇದರಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎಂಬುದು ನಮ್ಮ ಆಗ್ರಹವಾಗಿತ್ತು’ ಎಂದು ಉಮೇಶ್ ಹೇಳಿದರು.

ಎಲ್ಲ ಸಮುದಾಯದವರಿಗೆ ಅವಕಾಶ:

‘ಈ ದೇವಸ್ಥಾನದಲ್ಲಿ ಜಾತಿಯ ಆಧಾರದಲ್ಲಿ ಯಾರಿಗೂ ಪ್ರವೇಶ ನಿಷೇಧ ಇಲ್ಲ. ಪೂಜಾದಿ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವವರು ಮಾತ್ರ ಒಳಾಂಗಣಕ್ಕೆ ಹೋಗುತ್ತಾರೆ. ವಾದ್ಯ ನುಡಿಸುವ ಮಾರಾರ್, ಮಾಲೆ ಕಟ್ಟುವ ವಾರಿಯರ್‌ ಸಮುದಾಯದವರು ಒಳಗೆ ಹೋಗುತ್ತಾರೆ. ಅದೇ ಸಮುದಾಯದ ಇತರರಿಗೆ ಒಳಾಂಗಣಕ್ಕೆ ಪ್ರವೇಶ ಇಲ್ಲ ಎಂಬುದನ್ನು ಗಮನಿಸಬೇಕು. ಪೂರಂ ಸಂದರ್ಭದಲ್ಲಿ ವೆಳಿಚ್ಚಪ್ಪಾಡರು ಮಾಲೆ ಕಟ್ಟುತ್ತಾರೆ. ಕಾರ್ತಿಕ ಮಾಸದಲ್ಲಿ ಪದ್ಮಶಾಲಿ ಸಮುದಾಯದವರು ಕೆಲವು ಕಾರ್ಯ ನಿರ್ವಹಿಸುತ್ತಾರೆ. ನಂತರ ಅವರೂ ಹೊರಗೆಯೇ ನಿಲ್ಲಬೇಕು. ಹೀಗಾಗಿ ನಿರ್ದಿಷ್ಟ ಜಾತಿಯವರು ಮಾತ್ರ ಒಳಗೆ ಹೋಗುತ್ತಾರೆ ಎಂಬುದು ಅಪಪ್ರಚಾರ’ ಎಂದು ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ರವೀಂದ್ರನ್‌ ತಿಳಿಸಿದರು. 

‘ಭದ್ರಕಾಳಿಯನ್ನು ಪೂಜಿಸುವ ಈ ದೇವಸ್ಥಾನದ ನಿರ್ಮಾಣವೇ ವಿಶಿಷ್ಟವಾಗಿದೆ. ಗರ್ಭಗುಡಿ ಮತ್ತು ಒಳಾಂಗಣವನ್ನು ಸಂಪರ್ಕಿಸುವ ‘ಪಾಟ್‌ಕೂಡ್ ಮಂಟಪ’ ಇಲ್ಲಿದೆ. ಅದಕ್ಕೆ ಸಮಾನ ಎತ್ತರದಲ್ಲಿ ನಮಸ್ಕಾರ ಮಂಟಪ ಇದೆ. ಈ ಪ್ರದೇಶಗಳಿಗೆ ಸಾರ್ವಜನಿಕರು ಹೋಗುವಂತಿಲ್ಲ. ಅರ್ಚಕರು ಮಾತ್ರ ಅಲ್ಲಿ ನಿಂತು ನಮಸ್ಕಾರ ಮಾಡುತ್ತಾರೆ. ಹಿಂದಿನಿಂದಲೇ ನಡೆದುಕೊಂಡು ಬಂದ ಸಂಪ್ರದಾಯದಲ್ಲಿ ಲೋಪಗಳು ಇದ್ದರೂ ಇರಬಹುದು. ಅದನ್ನು ಈಗಿನ ಪರಿಸ್ಥಿತಿಯಲ್ಲಿ ಏಕಾಏಕಿ ಬದಲಿಸುವುದು ಕಷ್ಟ’ ಎಂದು ರವೀಂದ್ರನ್ ಹೇಳಿದರು.  

ಪಿಲಿಕೋಡ್ ಭಗವತಿ ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದೇವಿ ದರ್ಶನ ಪಡೆದ ನಾಗರಿಕರ ಸಮಿತಿ ಪ್ರತಿನಿಧಿಗಳು
ಕಣ್ಣೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ, ಭದ್ರಕಾಳಿ ದೇವಸ್ಥಾನ ದೇವಸ್ವಂ ಬೋರ್ಡ್‌ (ಮುಜರಾಯಿ) ಆಧೀನದ ರಯರಮಂಗಲ ದೇವಸ್ಥಾನ ಪುನರ್‌ಪ್ರತಿಷ್ಠೆಯ ನಂತರವೂ ಸಂಪ್ರದಾಯ ಮುಂದುವರಿಸಿದ್ದಕ್ಕೆ ವಿರೋಧ
ದೇವರ ದರ್ಶನದಲ್ಲಿ ಆಸಕ್ತಿಯೇ ಇಲ್ಲದವರು ‘ದೇವಾಲಯ ಪ್ರವೇಶ ಹೋರಾಟ’ ಮಾಡಿದ್ದಾರೆ. ಉನ್ನತ ಕುಲಜಾತರು ಮಾತ್ರ ಒಳಗೆ ಹೋಗುತ್ತಾರೆ ಉಳಿದವರಿಗೆ ಪ್ರವೇಶ ಇಲ್ಲ ಎಂಬ ಅಪ್ಪಟ ಸುಳ್ಳು ಸುದ್ದಿಯನ್ನು ಹರಿಯಬಿಟ್ಟಿದ್ದಾರೆ. ರವೀಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.