ADVERTISEMENT

ಅಂದು ‍ಪುಂಡ; ಇಂದು ಹೀರೊ

ಧನಂಜಯ ಆನೆ ಪಾಲಿಗೆ ಚೊಚ್ಚಲ ದಸರಾ‌ ಮಹೋತ್ಸವ

ಕೆ.ಓಂಕಾರ ಮೂರ್ತಿ
Published 2 ಸೆಪ್ಟೆಂಬರ್ 2018, 19:24 IST
Last Updated 2 ಸೆಪ್ಟೆಂಬರ್ 2018, 19:24 IST
ಧನಂಜಯ ಆನೆ
ಧನಂಜಯ ಆನೆ   

ಮೈಸೂರು: ನಾಲ್ಕು ವರ್ಷಗಳ ಹಿಂದೆ ಪುಂಡಾನೆಯಾಗಿ ಮೆರೆದು ರೈತರ ಆಕ್ರೋಶಕ್ಕೆ ಗುರಿಯಾಗಿದ್ದ ಧನಂಜಯ ಆನೆಗೆ ಈಗ ಜನರಿಂದಲೇ ಅದ್ದೂರಿ ಸ್ವಾಗತ ದೊರೆತಿದೆ.‌

ಇದೇ ಮೊದಲ ಬಾರಿ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಈ ಆನೆಯತ್ತ ಎಲ್ಲರ ಚಿತ್ತ ಹರಿದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿಯಿಂದ ಭಾನುವಾರ ಮೈಸೂರಿನತ್ತ ಹೊರಟ ಈ ಸಲಗವನ್ನು ಕಾಡಂಚಿನ ಜನರು ಪ್ರೀತಿಯಿಂದ ಬೀಳ್ಕೊಟ್ಟರು.

ಭವಿಷ್ಯದಲ್ಲಿ ಚಿನ್ನದ ಅಂಬಾರಿ ಹೊರಿಸಲು ತಾಲೀಮು ನೀಡುವ ದೃಷ್ಟಿಯಿಂದ ದುಬಾರೆ ಶಿಬಿರದ 35 ವರ್ಷದ ಈ ಆನೆಯನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ಧನಂಜಯ ಬಹುದೊಡ್ಡ ಪುಂಡಾನೆ. ಸಕಲೇಶಪುರದ ಬಳಿ ಕಾರ್ಮಿಕರೊಬ್ಬರ ಮೇಲೆ ಎರಗಿ ಕೊಂದು ಹಾಕಿತ್ತು. 2013–14ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಸಲಗಗಳ ಉಪಟಳ ಜೋರಾಗಿತ್ತು. ತೋಟ, ಹೊಲಗದ್ದೆಗಳಿಗೆ ನುಗ್ಗಿ ಫಸಲು ನಾಶ ಮಾಡುತ್ತಿದ್ದವು. ಹಲವಾರು ಮಂದಿ ಈ ಆನೆಗಳಿಗೆ ಬಲಿಯಾಗಿದ್ದರು.

ಹೀಗಾಗಿ, ಪುಂಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿತ್ತು. ಆಗ ಅರಣ್ಯ ಇಲಾಖೆಯು ಹಲವು ಆನೆಗಳನ್ನು ಖೆಡ್ಡಾಕ್ಕೆ ಕೆಡವಿತ್ತು. ಆ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ ಆನೆಯೇ ಧನಂಜಯ.

‘ಅದೊಂದು ಸವಾಲಿನ ಕಾರ್ಯಾಚರಣೆ. ಅದರಲ್ಲೂ ಧನಂಜಯನನ್ನು ಸೆರೆ ಹಿಡಿದಾಗ ರೈತರು, ಕಾರ್ಮಿಕರು ನಿಟ್ಟುಸಿರುಬಿಟ್ಟಿದ್ದರು. ಈ ಆನೆಯನ್ನು ಕ್ರಾಲ್‌ಗೆ (ಆನೆ ಪಳಗಿಸುವ ದೊಡ್ಡಿ) ಹಾಕಿ ಕೊಡಗಿನ ದುಬಾರೆ ಶಿಬಿರದಲ್ಲಿ ಪಳಗಿಸಿದೆವು. ಧನಂಜಯ ಎಂದು ಹೆಸರಿಟ್ಟೆವು. ಈಗ ಸಂಪೂರ್ಣ ಬದಲಾಗಿದೆ’ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪಶುವೈದ್ಯ ಡಿ.ಎನ್‌.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಜೆ.ಸಿ.ಭಾಸ್ಕರ್‌ (ಮಾವುತ) ಹಾಗೂ ಜೆ.ಬಿ.ಸೂನ್ಯ (ಕಾವಾಡಿ) ಈ ಆನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಜನರ ಪ್ರೀತಿಗೆ ಪಾತ್ರರಾಗಿರುವುದು ಮಾತ್ರವಲ್ಲ; ಕಾಡಾನೆಗಳ ಕಾರ್ಯಾಚರಣೆಗೂ ಇದು ಎತ್ತಿದ ಕೈ. 4,050 ಕೆ.ಜಿ ತೂಕದ ಈ ಆನೆಯು
ಬಲಿಷ್ಠವಾಗಿದ್ದು, ಐದಾರು ಪುಂಡಾನೆಗಳನ್ನು ಸೆರೆ ಹಿಡಿದಿದೆ.

‘ಈಗ ಸಂಪೂರ್ಣವಾಗಿ ಶಾಂತವಾಗಿದೆ. ಮಗುವಿನಂತೆ ನೋಡಿಕೊಳ್ಳುತ್ತಿದ್ದೇನೆ. ಅದು ಕೂಡ ತುಂಬಾ ಆತ್ಮೀಯತೆ ಬೆಳೆಸಿಕೊಂಡಿದೆ. ಹೇಳಿದ ಮಾತು ಕೇಳುತ್ತದೆ’ ಎಂದು ಹೇಳುತ್ತಾರೆ ಮಾವುತ ಜೆ.ಸಿ.ಭಾಸ್ಕರ್‌.

**

ಮುಂಗೋಪಿ ಧನಂಜಯ ಆನೆ ಪಳಗಿದ ರೀತಿಯೇ ಅಚ್ಚರಿ. 4 ವರ್ಷಗಳಲ್ಲಿ ಮೃದು ಸ್ವಭಾವಿಯಾಗಿದೆ. 10 ವರ್ಷಗಳಲ್ಲಿ ಅಂಬಾರಿ ಹೊರಲು ಸಜ್ಜುಗೊಳಿಸಬಹುದು.

-ಡಾ.ಡಿ.ಎನ್‌.ನಾಗರಾಜು, ಪಶುವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.