ADVERTISEMENT

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯ: ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ

'ನಮ್ಮ ಜನಾಂಗದ ಮುಖ್ಯಮಂತ್ರಿಯೇ ಸ್ಪಂದಿಸಲಿಲ್ಲ' 

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 7:51 IST
Last Updated 22 ಫೆಬ್ರುವರಿ 2021, 7:51 IST
ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ
ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ   

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಮಹಾ ರ್ಯಾಲಿ ನಂತರವೂ, ,2ಎ ಮೀಸಲಾತಿ ನೀಡುವ ಕುರಿತು ಯಾವುದೇ ಕ್ರಮಕ್ಕೆ ರಾಜ್ಯಸರ್ಕಾರ ಮುಂದಾಗದಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಮುದಾಯದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.‌

ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ,
'ನಮ್ಮ‌ ಜನಾಂಗದ ಮುಖ್ಯಮಂತ್ರಿಯವರು ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ ಎನ್ನುವ ಭರವಸೆ ಇತ್ತು. ಆದರೂ ಅವರಿಂದ ಯಾವುದೇ ಸ್ಪಂದನೆ ಸಿಗಲಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ಸರ್ಕಾರದ ಪರವಾಗಿ ಸಚಿವ ಸಿ.ಸಿ.ಪಾಟೀಲ ಹಾಗೂ ನಿರಾಣಿ ಸಮಾವೇಶಕ್ಕೆ ಬಂದು ಮನ ಒಲಿಸುವ ಪ್ರಯತ್ನ ಮಾಡಿದರು. ಇದಕ್ಕೆ ನಾವು ಒಪ್ಪಿಲ್ಲ. ಸಮುದಾಯದ ಜನರೂ ಧರಣಿ ಮಾಡುವಂತೆ ಒತ್ತಾಯಿಸಿದ್ದರಿಂದ ಪ್ರತಿಭಟನೆ ಮುಂದುವರಿಸಿದ್ದೇವೆ' ಎಂದರು.

'ಅನೇಕ‌ ಸಮಾವೇಶಗಳು ಹೋರಾಟಗಳು ಬೆಂಗಳೂರಿಗೆ ಬಂದ ತಕ್ಷಣ ಅಂತ್ಯ ಆಗುವುದನ್ನು ನೋಡಿದ್ದೇವೆ. ಆದರೆ ನಮ್ಮ ಹೋರಾಟ ಕೇವಲ ಭರವಸೆಗೆ ಮುಕ್ತಾಯವಾಗುವುದಿಲ್ಲ. ಮೀಸಲಾತಿ ಆದೇಶ ಪಡೆದೇ ಪೀಠಕ್ಕೆ ಮರಳುತ್ತೇನೆ' ಎಂದರು.
ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಪಂಚಮಸಾಲಿ ಸಮುದಾಯದ ನೂರಾರು ಜನ ಪ್ರತಿಭಟನೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.