ಆರ್. ಅಶೋಕ, ಬಿ.ವೈ. ವಿಜಯೇಂದ್ರ
ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಅನಾಮಿಕ ವ್ಯಕ್ತಿಯ ಗುರುತು ಬಹಿರಂಗವಾಗಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಈ ಇಬ್ಬರು ಬಿಜೆಪಿಯ ನಾಯಕರು ಸದನದಲ್ಲಿ ಧ್ವನಿ ಎತ್ತಿದ್ದಾರೆ. ಅಲ್ಲದೆ ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತ ಹಂಚಿಕೊಂಡಿದ್ದರಾೆ.
'ಧರ್ಮಸ್ಥಳ ಅಸಂಖ್ಯಾತ ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರ. ಅಲ್ಲಿ ಹಿಂದೂಗಳ ನಂಬಿಕೆಗೆ ಧಕ್ಕೆ ತಂದ ಕಾರಣದಿಂದ ಸರ್ಕಾರದ ನಡೆಯ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ' ಎಂದು ವಿಜಯೇಂದ್ರ ತಿಳಿಸಿದ್ದಾರೆ.
'ಎಸ್‌ಐಟಿ ತನಿಖೆ ಮಾಡುವುದಿಲ್ಲ ಎನ್ನುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಸ್‌ಐಟಿ ರಚಿಸುವಂತೆ ಯಾವ ಶಕ್ತಿಗಳು, ಯಾವ ಸಂಘಟನೆಗಳು ಒತ್ತಡ ಹೇರಿತ್ತು ಎಂಬುದನ್ನು ಸದನದಲ್ಲಿ ಬಹಿರಂಗಪಡಿಸಬೇಕು. ಸರ್ಕಾರ ಧರ್ಮಸ್ಥಳ ತನಿಖೆಯ ಮಧ್ಯಂತರ ವರದಿಯನ್ನು ನೀಡಬೇಕು. ಆ ಮುಸುಕುಧಾರಿಯ ಹಿನ್ನೆಲೆ ಏನು, ಆತನ ಹಿಂದೆ ಇರುವವರು ಯಾರು ಎಂಬುದು ಸಹ ತನಿಖೆಯಾಗಬೇಕೆಂದು ಆಗ್ರಹಿಸುತ್ತೇನೆ' ಎಂದಿದ್ದಾರೆ.
ಮತ್ತೊಂದೆಡೆ ಪೋಸ್ಟ್ ಮಾಡಿರುವ ಅಶೋಕ, 'ಅದ್ಯಾವನೋ ಅನಾಮಿಕನ ಮಾತು ಕೇಳಿಕೊಂಡು ಎಡಪಂಥೀಯರ ಕುಮ್ಮಕ್ಕಿನಿಂದ 20 ವರ್ಷ ಹಿಂದೆ ಹೂಳಲಾಗಿದೆ ಎನ್ನುವ ಶವಗಳನ್ನು ಪತ್ತೆಮಾಡಲು ದಿನಕ್ಕೊಂದು ಕಡೆ ಸಿಕ್ಕಸಿಕ್ಕ ಜಾಗದಲ್ಲಿ 20 ಅಡಿ ಅಗೆಯುತ್ತಿರುವ ಸರ್ಕಾರದ ಮೂರ್ಖತನಕ್ಕೆ ಏನು ಹೇಳೋಣ' ಎಂದು ಪ್ರಶ್ನಿಸಿದ್ದಾರೆ.
'ಆರೋಪ ಮಾಡುತ್ತಿರುವ ಅನಾಮಿಕ ವ್ಯಕ್ತಿಯ ಗುರುತು ಬಹಿರಂಗವಾಗಲಿ. ಅವನು ತೋರಿಸಿದ ಕಡೆಯೆಲ್ಲೆಲ್ಲಾ ಮೂರ್ಖರಂತೆ ಗುಂಡಿ ತೋಡುವುದು ಬಿಟ್ಟು ಎಸ್‌ಐಟಿ ತನಿಖೆ ಸರಿಯಾದ ರೀತಿಯಲ್ಲಿ ಮುಂದುವರೆಯಲಿ. ಈ ವಿಚಾರದಲ್ಲಿ ಸರ್ಕಾರದ ಮೂರ್ಖ ನಡೆ ಈಗಾಗಲೇ ಜನರ ಮುಂದೆ ನಗೆಪಾಟಲಿಗೆ ಈಡಾಗಿದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.